Saturday 9 May 2009

ಎಂತ "ಮರಳ"ಯ್ಯ ಇದು ಎಂತಾ "ಮರಳು"!

ಓದುಗರೆ, ಏಪ್ರಿಲ್‌ನ ತುಂತುರು ನಗೆಹನಿ, ಮೇ ತಿಂಗಳ ತನಕ ಮುಂದುವರೆದದಕ್ಕೆ ಕ್ಷಮೆ ಇರಲಿ! ಕೆಲಸದ ಕಾರಣ ಎರಡು ತಿಂಗಳಿಂದ ನನ್ನ ವಾಸ ಸೌದಿ ಅರೇಬಿಯದ ಮರಳುಗಾಡಿನಲ್ಲಿ. ಬರೆಯಲು ಬಿಡುವಾಗಲಿಲ್ಲ. ಬಿಡುವಾದಾಗ ಏನು ಬರೆಯಬೇಕೆಂದು ತೋಚಲಿಲ್ಲ! ನನಗಂತೂ ಬೇಕೆಂದಾಗ ಬರೆಯಲು ಆಗುವುದೇ ಇಲ್ಲ. ಎಲ್ಲರಿಗೂ ಹೀಗೆಯೇ ಆಗುತ್ತದೆಯೋ ಗೊತ್ತಿಲ್ಲ. ಲ್ಯಾಪ್ ಟಾಪ್ ಮೇಲೆ ಕೈ ಬೆರಳುಗಳು ನಡೆದಾಡಲು ರೆಡಿ ಇದ್ದರೂ, ತಲೆಯಲ್ಲಿ ವಿಚಾರಗಳು ಬರುವುದೇ ಇಲ್ಲ! ಈ ದಿನ, ಶುಕ್ರವಾರ ಇಲ್ಲಿ ರಜಾ ದಿನ. ಬರೆಯಲು ಕುಳಿತೆ.

ಸೌದಿ ಅರೇಬಿಯದ ಬಗ್ಗೆ ಇಲ್ಲಿಗೆ ಬರುವ ಮೊದಲು ಬಹಳ ಕೇಳಿದ್ದೆ. ಕುತೂಹಲವಿತ್ತು. ಬಹಳ ಸೋಜಿಗದ ದೇಶ ಇದು. ನಾ ಇಲ್ಲಿಗೆ ಬಂದಾಗ ಇನ್ನೂ ಬಹಳ ಚಳಿ ಇತ್ತು. ನಾ ಬಂದ ಮೇಲೆ ಇಲ್ಲಿ ಧಾರಾಕಾರವಾಗಿ ಮಳೆಯೂ ಆಯ್ತು (ಸಿಂಗಪುರದಿಂದ ನನ್ನ ಜೊತೆಗೆ ಬಂದಿತೇನೊ ಆ ಮಳೆ). ಮರಳುಗಾಡಿನಲ್ಲಿ ಮಳೆಯೇ ಬರುವುದಿಲ್ಲ ಎನ್ನುವ ನನ್ನ ಭ್ರಮೆ ಸುಳ್ಳಾಗಿತ್ತು. ಕೆಲವು ದಿನವಂತೂ ಆಲಿಕಲ್ಲಿನ ಮಳೆ ಕೂಡ ಬಿತ್ತು! ಮಲೆನಾಡಿನ ಮಡಿಲಲ್ಲಿ ಹುಟ್ಟಿದ ನನಗೆ ಮಳೆ ಹೊಸದಲ್ಲ. ಪರವಾಗಿಲ್ಲ, ತೊಂದರೆಯಿಲ್ಲ ಎಂದು ನಿಟ್ಟುಸಿರುವ ಬಿಡುವ ಮೊದಲೇ, ಶುರುವಾಗಿತ್ತು ಬಿಸಿಲಿನ ಪ್ರಹಾರ. ಒಂದೇ ವಾರದಲ್ಲಿ, ೪೭ ಸೆಂ.ಗ್ರೇ ತನಕ ಏರಿತ್ತು ತಾಪಮಾನ. ಇಲ್ಲಿಯವರು ಹೇಳಿದರು, ಇದಿನ್ನೂ ಪ್ರಾರಂಭ ಅಷ್ಟೆ, ಮುಂದಿದೆ ಮುದುಕಿ ಹಬ್ಬ ಅಂತ! ದ್ರುಷ್ಠಿ ಸಾಗುವವರೆಗೂ ಬರೀ ಮರಳು. ಹನಿ ನೀರಾವರಿ ಬಳಸಿ, ರಸ್ತೆಬದಿಯ ಗಿಡಗಳನ್ನು ಜೀವಂತವಿರುಸುತ್ತಾರೆ. ಹಸಿರು ತುಂಬಿದ ಮಲೆನಾಡಿನ ಐಸಿರಿ ಅಗಾಗ ನೆನಪಾಗುತ್ತದೆ. ನಮ್ಮ ದೇಶದ ಪ್ರಾಕ್ರುತಿಕ ಸಂಪತ್ತಿನ ಬಗ್ಗೆ ಹೆಮ್ಮೆನಿಸುತ್ತದೆ. ಅಲ್ಲಿದ್ದಾಗ ಅದರ ಪ್ರಾಮುಖ್ಯತೆ ಅರಿಯದೆ, ನಮ್ಮೂರು ಬಿಟ್ಟು ದೂರ ಬಂದಾಗ, ಅದರ ಅಮೂಲ್ಯ ಬೆಲೆಯ ಅರಿವಾಗುತ್ತದೆ.

ಇಲ್ಲಿನ ಜನರೊಂದಿಷ್ಟು ನನಗೆ ಪರಿಚಯವಾಗಿದ್ದಾರೆ. ನನಗನ್ನಿಸಿದಂತೆ ಬಹಳ ಸ್ನೇಹ ಪ್ರಿಯರು ಇವರು. ಅವರ ಪಾಡಿಗಿರುತ್ತಾರೆ. ಸ್ವಲ್ಪ ಆಲಸಿಗಳೆಂದು ಕಾಣುತ್ತಾರೆ. ಈ ದೇಶದ ರೀತಿ ನೀತಿಗಳ ಬಗ್ಗೆ ಇಲ್ಲಿ ಬರೆಯಲಿಚ್ಚಿಸುವುದಿಲ್ಲ. ಏಕೆಂದರೆ, ಇದು ಅವರ ದೇಶ , ಅವರ ಕಾನೂನು. ತಪ್ಪು ಸರಿಗಳ ತುಲನೆ ಇಲ್ಲಿ ಅನಗತ್ಯ.

ಮತ್ತೆ ಆದಾಗ ಬರೆಯುತ್ತೇನೆ. ತಾಣಕ್ಕೆ ಭೇಟಿ ನೀಡುತ್ತಿರಿ.
ಗಿರೀಶ್ ಜಮದಗ್ನಿ

4 comments:

ಮನಸು said...

ಗಿರೀಶ್ ಸರ್,
ನೀವು ನಮ್ಮ ಪಕ್ಕದ ದೇಶಕ್ಕೆ ಬಂದುಬಿಟ್ಟಿರಾ..... ಬಿಸಿಲ ಅನುಭವ ಚೆನ್ನಾಗೆ ಆಗಿರಬೇಕು...ಇನ್ನು ಜೂನ್,ಜುಲೈ ಬರಲಿ ಮತ್ತಷ್ಟು ಅನುಭವಾಗುತ್ತದೆ...ಹಾ ಹಾ ಹಾ....ನೀವು ಹೇಳಿದ ಹಾಗೆ ಇಲ್ಲಿ ಹಸಿರ ಬೆಳೆಸಲು ಎಷ್ಟು ಕಷ್ಟ ಪಡುತ್ತಾರೆ ಅಲ್ಲವೆ..? ಜನರು ಅವರ ಪಾಡಿಗೆ ಅವರು ಇರುತ್ತಾರೆ ನಮಗಳಿಗೇನು ತೊಂದರೆ ಕೊಡುವುದಿಲ್ಲ..... ನಮಗೊ ನಿಮ್ಮ ಹಾಗೆ ಅನುಭವಗಳು ಆಗಿವೆ...ಬಹಳದಿನದ ನಂತರ ಬರೆದಿದ್ದೀರಿ ವಂದನೆಗಳು.... ಸೌದಿಯಲ್ಲಿ ಯಾವ ಊರಿನಲ್ಲಿದ್ದೀರಿ.... ಕೆಲಸ ನಿಮ್ಮಿತ್ತವೇ ಸ್ವಲ್ಪ ದಿನವಾದರೆ ತೊಂದರೆ ಇಲ್ಲ ಇನ್ನು ಹೆಚ್ಚು ದಿನ ಇರಬೇಕಾದರೆ ನಿಮಗೆ ಬೇಸರ ಹೆಚ್ಚು... ಆಗಬಹುದು.. ನಾವುಗಳಂತು ಇಲ್ಲಿನ ವಾತವರಣ ಜನ, ಊರು ಎಲ್ಲದಕ್ಕೊ ಹೊಂದುಕೊಂಡಿದ್ದೇವೆ.
ಧನ್ಯವಾದಗಳು

SSK said...

ಗಿರೀಶ್ ಅವರಿಗೆ ನಮಸ್ಕಾರಗಳು, ಬಹಳ ದಿನಗಳಿಂದ ನಿಮ್ಮ ಬ್ಲಾಗಿನಲ್ಲಿ ಯಾವ ಲೇಖನವೂ ಬರದೆ ಇದ್ದುದರಿಂದ, ನೀವು ಹೇಗಿದ್ದೀರೋ, ಏನಾಯಿತೋ ಎಂದು ಚಡ್ಪಡಿಸಿದ್ದೆ! ಈಗ ವಿಷಯ ತಿಳಿದು ಸಮಾಧಾನವಾಯಿತು!!
ಸೌದಿಯ ವಾಸದ ಅನುಭವದ ಈ ಲೇಖನ ಚೆನ್ನಾಗಿದೆ. ನೀವು ಹೇಳಿದ್ದು ಸತ್ಯವಾದ ಮಾತು, ಯಾವುದೇ ವಸ್ತು ನಮಗೆ ಸುಲಭವಾಗಿ ದೊರೆಯುತ್ತಿದ್ದರೆ ನಾವೆಲ್ಲಾ ಅದರ ಬಗ್ಗೆ ನಿರ್ಲಕ್ಷ್ಯ ತಾಳುತ್ತೇವೆ. ಅದೇ ಬೇರೆ ಜಾಗದಲ್ಲಿ ಅವು ದೊರೆಯುವುದು ದುಸ್ತರವಾದಾಗ ಅದರ ಕೊರತೆ ನಮಗೆ ಅನುಭವವಾಗುತ್ತದೆ!!!
ನಾವು ಸಹ ವಿದೇಶ ಪ್ರವಾಸಕ್ಕೆ ಹೋಗಿದ್ದಾಗ, ನಾವು ಅಪ್ಪಟ ಸಸ್ಯಹಾರಿಗಳಾದ್ದರಿಂದ ಆಹಾರದ ಕೊರತೆಯನ್ನು ಅನುಭವಿಸಿದ್ದೇವೆ! ಇಲ್ಲಿ ಉಪ್ಪಿಟ್ಟು, ಅವಲಕ್ಕಿನಾ......... ಅದದೇ ತಿಂಡಿ ಎಂದು ಕೆಲವೊಮ್ಮೆ ಮೂಗು ಮುರಿಯುವ ನಾವು ಅಂತಹ ಸ್ಥಳದಲ್ಲಿ ಇವೆ ತಿಂಡಿಗಳು ಸಿಕ್ಕರೆ ಅದಕ್ಕಿಂತಾ ಸ್ವರ್ಗ ಬೇರೆ ಇಲ್ಲ ಎಂದು ಅಂದುಕೊಂಡೆವು! ಎಂತಹ ವಿಪರ್ಯಾಸ ಅಲ್ಲವೇ?!

Girish Jamadagni said...

manasu - ಹೌದು ರೀ...ಅಸಾಧ್ಯ ಬಿಸಿಲು, ನಿಮ್ಮ ನೆರೆ ದೇಶ. ನಾನಿರುವುದು ಜುಬೈಲ್ ನಗರ. ಇನ್ನು ಆರು ತಿಂಗಳ ಕಾಲ ಇಲ್ಲೇ ವಾಸ. ಮಧ್ಯೆ ಮಧ್ಯೆ ಸಿಂಗಾಪುರ್ ಪ್ರಯಾಣ..ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು..ಸಿಗೋಣ...

Girish Jamadagni said...

SSK-ನಿಮ್ಮ ಕಳಕಳಿಗೆ ಧನ್ಯವಾದಗಳು. ಸೌದಿ ವಾಸ ನಡೀತಿದೆ. ಬಿಸಿಲಿನ ಬೇಗೆ ಸಕತ್ತಾಗಿದೆ! ನಾನು ಕೂಡ ಸಸ್ಯಾಹಾರಿ...ಎಲ್ಲ ಕಡೆ ತೊಂದರೆಯೆ...ಆದರೆ ಸಾಕಷ್ಟು ದೇಶ ಸುತ್ತಿರುವುದರಿಂದ ಅಭ್ಯಾಸವಾಗಿದೆ. ಒಂದು ವಸ್ತುವಿನ ಮೌಲ್ಯ ತಿಳಿಯುವುದು ಅದು ನಮ್ಮಲ್ಲಿ ಅದು ಇಲ್ಲವಾದಾಗಲೇ. ಹಾರುವ ಹಕ್ಕಿಗೆ ಸ್ವಾತಂತ್ರದ ಬೆಲೆ ಅರಿವಾಗುವುದು, ಅದು ಪಂಜರದಲ್ಲಿ ಸಿಕ್ಕಾಗಲೇ. ತಲೆನೋವು ಬಂದಾಗಲೇ ನಮಗೆ ತಲೆಯ ಇರುವಿಕೆಯ ಅರಿವಾಗುವುದು!ಇನ್ನೂ ಒಳ್ಳೆಯ ಉದಾಹರಣೆ, ನಮಗೆ ಹತ್ತಿರವಾದವರು ದೂರವಾದಾಗ!

ಬರುತ್ತಿರಿ...ಧನ್ಯವಾದಗಳು