Thursday 11 December 2008

ಮೂರು ಮತ್ತೊಂದು !

ನನ್ನವಳು ಯಾವಾಗಲೂ ಹೇಳ್ತಾ ಇರ್‍ತಾಳೆ. "ನಿಮಗೆ ಎಲ್ಲ ವಿಷಯವನ್ನೂ ಮೂರು ಮೂರು ಸಾರಿ ಹೇಳಿದ್ರೇನೆ ತಲೆಗೆ ಹೋಗೋದು. ಒಂದು ಸಾರಿ ಹೇಳಿದ್ರೆ ಯಾಕೆ ಙ್ನಾಪಕ ಇರಲ್ಲಾ?" ಅಂತ. ನನಗೆ ಗೊತ್ತು ಇದು ಜಗತ್ತಿನ ಎಲ್ಲ ಗಂಡಂದಿರಿಗೂ ಅನ್ವಯಿಸಿದರೂ ಕೂಡ, ಮೂರು ಅನ್ನೋ ಸಂಖ್ಯೆ, ನನ್ನ ಜೀವನದಲ್ಲಿ ಎಲ್ಲ ಕಡೆ ಬಂದು ಕಾಡತಾ, ಖುಷಿ ಕೊಡತಾ ಇರುತ್ತೆ. ನನ್ನ ಜನ್ಮದಿನ (೨೧, ೨+೧=೩)ಇಂದ ಹಿಡಿದು, ನಮ್ಮ ಮನೆ ಸಂಖ್ಯೆ, ದೂರವಾಣಿ ಸಂಖ್ಯೆ, ನಾ ಕೊಂಡ ಮೊದಲ ಮೋಟಾರ್ ಗಾಡಿ, ಕೊನೆಗೆ ನನ್ನ ಕಚೇರಿ ಸಿಬ್ಬಂದಿ ಸಂಖ್ಯೆಯವರೆಗೂ ನನ್ನ ಜೊತೆಯೇ ಬಂದುಬಿಡುತ್ತದೆ. ಯಾಕೋ ಏನೊ, ನನ್ನ ಮತ್ತು ಮೂರರ ನಂಟು, ಜನ್ಮಾಂತರಗಳದ್ದು ಅನ್ನಿಸುತ್ತದೆ. ನನ್ನ ಸ್ನೇಹಿತನೊಬ್ಬ ಹೇಳಿದಾನೆ ಕೂಡ. "ಏನೇ ಕೆಲಸ ಮಾಡಿದರೂ ತಿಂಗಳ ೩,೬,೯,೧೨,೧೫,೧೮,೨೧,೨೪,೨೭,೩೦ ತಾರೀಖಿನಲ್ಲೇ ಮಾಡು. ಇಲ್ಲದಿದ್ದರೆ ನಿನ್ನ ಕೆಲಸ ಕೆಡುತ್ತೆ" ಅಂತ. ಅದನ್ನು ಪರೀಕ್ಷಿಸಲು ಹೋಗಿ, ಕೈ ಸುಟ್ಟುಕೊಂಡಿದ್ದೂ ಇದೆ!

ನನ್ನ ವಿಷಯ ಬಿಡಿ. ಸಂಖ್ಯೆ ಮೂರಕ್ಕೆ ಕೆಲವು ಪ್ರಾಮುಖ್ಯತೆಗಳಿವೆ ಕೂಡ. ವೇದಘೋಷಗಳಲ್ಲಿ, ಶಾಂತಿಮಂತ್ರಗಳಲ್ಲಿ, ಶಾಂತಿಃ, ಶಾಂತಿಃ, ಶಾಂತಿಃ ಎಂದು ಮೂರು ಬಾರಿ ಹೇಳಲಾಗುತ್ತೆ. ಯಾಕೆ ಮೂರು ಸಾರಿ? ಯಾಕೆಂದರೆ, ಶಾಂತಿಯನ್ನು ಕದಡಲು, ಮೂರು ಮೂಲಗಳಿವೆಯಂತೆ. ನಮ್ಮ ದೇಹ, ಮನಸ್ಸಿನಿಂದ ಆಗುವ ತೊಂದರೆಗಳನ್ನು ಶಾಂತವಾಗಿಸಲು ಮೊದಲನೇ ಶಾಂತಿ (ಆಧ್ಯಾತ್ಮಿಕ), ನಮ್ಮಿಂದ ಹೊರಗಿರುವ ಭೌತಿಕ ವಸ್ತುಗಳಿಂದ, ಭೂಮಿಯಿಂದ ,ಪ್ರಕೃತಿಯಿಂದ, ವಾತಾವರಣದಿಂದ ಉಂಟಾಗವು ತೊಂದರೆಗಳನ್ನು ಶಾಂತಗೊಳಿಸಲು ಎರಡನೇ ಶಾಂತಿ (ಆಧಿಬೌತಿಕ) ಮತ್ತು ಇದೆಲ್ಲವನ್ನು ಮೀರಿದ ಶಕ್ತಿಗಳಿಂದ, ನಮ್ಮ ಪೂರ್ವ ಕರ್ಮಗಳಿಂದ ಒದಗಬಹುದಾದ ತೊಂದರೆಗಳನ್ನು ಶಾಂತಗೊಳಿಸಲು, ಮೂರನೆಯ ಹಾಗು ಕೊನೆಯ ಶಾಂತಿ (ಆಧಿದೈವಿಕ).
ಚೀನಿಯರಲ್ಲೂ ಕೂಡ ಸಂಖ್ಯೆ ಮೂರು ಬಹಳ ಗಣನೀಯ, ಏಕೆಂದರೆ, ಚೀನಿ ಭಾಷೆಯಲ್ಲಿ ಸಂಖ್ಯೆ ಮೂರು, "ಜೀವಂತ" ಅಥವ "ಸಜೀವ" ಚೀನಿ ಪದ ಕೇಳಿದಂತೆ ಕೇಳುತ್ತದೆ! ನಮ್ಮ ಕೋರ್ಟ್‌ಗಳಲ್ಲಿ, ಸಾಕ್ಷಿಗಳನ್ನು ಮೂರು ಬಾರಿ ಕರೆಯುವುದು ಪದ್ಧತಿ. ಹಾಗೆ, ಹರಾಜು ಹಾಕುವಾಗ ಕೊನೆಯ ನಿರ್ಧಾರಿತ ಬೆಲೆಯನ್ನು, ಮೂರುಬಾರಿ ಕೂಗಿ ಖಚಿತಪಡಿಸಿಕೊಳ್ಳುವುದು ಸರ್ವೇಸಾಮಾನ್ಯ. ನಮ್ಮ ಪುರಾಣದ ಉದಾಹರಣೆ ಕೂಡ ಇಲ್ಲವೆ? ಆತ್ಮಲಿಂಗ ಹಿಡಿದ ವಟುವಿನ ವೇಷದ ಗಣೇಶ, ಮೂರು ಬಾರಿ "ರಾವಣ"ನನ್ನು ಕರೆದು, ಆತ್ಮಲಿಂಗವನ್ನು ನೆಲದಲ್ಲಿಡಲಿಲ್ಲವೆ?

ಎರಡು ಪ್ರಯತ್ನದಲ್ಲಿ ಆಗದ ಕೆಲಸ ಮೂರನೇ ಪ್ರಯತ್ನದಲ್ಲಿ ಆಗೇ ಆಗುತ್ತೇ ಎನ್ನುವ ಮಾತು ಕೇಳುತ್ತಲೇ ಇರುತ್ತೇವೆ. ಹಿಂದು ಪುರಾಣದ ಪ್ರಕಾರ, ಲೋಕಗಳು ಮೂರು. ಸ್ವರ್ಗ, ನರಕ, ಪಾತಾಳ (ಆದರೆ ಲೋಕಗಳು ಒಟ್ಟು ೧೪ ಎಂಬ ವಿಷ್ಲೇಷಣೆಯೂ ಇದೆ).
ಗಣಪ್ಪನ ಅಪ್ಪ ನೀಲಕಂಠನಿಗೆ ಕಣ್ಣು ಮೂರಲ್ಲವೇ? ಸಂಸಾರದ ತಾಪಗಳು "ತ್ರಯ"ವಲ್ಲವೇ? ಹೀಗೆ ಬರೆಯುತ್ತಾ ಹೋದರೆ, ಮೂರರ ಮಹಾತ್ಮೆಗೆ ಕೊನೆಯಿಲ್ಲ!

ಹೋಗ್ತಾ ಹೋಗ್ತಾ, ಒಂದು ಜನಪದ ಒಗಟು. "ನಾರು ಸೀರೆಯನುಟ್ಟು ನಲಿದಾಡುತಿಹಳು, ನೀರಕೊಡಗಳ ಹೊತ್ತು ತಾ ಮೆರೆಯುತಿಹಳು, ನೋಡಿದವರಿಗೆ, ಮೂರು ಕಣ್ಣ ತೋರುವಳು, ಕೇಳಿದವರಿಗೆ ಅಮೃತ ಸವಿದೋರುತಿಹಳು, ಯಾರಿವಳು?"

ಸಿಗೋಣ....ಗಿರೀಶ್ ಜಮದಗ್ನಿ
(ಒಗಟಿನ ಉತ್ತರ - ತೆಂಗು)

No comments: