Friday 17 October 2008

ಮೊದಲ ಬ್ಲಾಗ್ !

ನಮಸ್ಕಾರ ( )
ಎಲ್ಲರಿಗಿರುವಂತೆ ನನ್ನದು ಒಂದು ಬ್ಲಾಗ್ ! ಇದುವರೆಗೂ ನನ್ನದೇ ಬ್ಲಾಗ್ ತಾಣ ತೆರೆಯುವ ಬಗ್ಗೆ ಯೋಚಿಸಿಯೇ ಇರಲಿಲ್ಲ. ಇವತ್ತು ಯಾಕೋ ಎಲ್ಲೋ ಏನೋ "ಸರ್ಫಿ"ಸುತ್ತಿದ್ದಾಗ, ಈ ಬ್ಲಾಗ್‍ಸ್ಪಾಟ್ ತಾಣ ತಲುಪಿದ್ದೆ! ಹಾಗೆ ಶುರುವಾಯಿತು ನನ್ನ ಬ್ಲಾಗ್‍ನ ಜನ್ಮ ಗಾಥೆ! ಸರಿ, ಇನ್ನು ಕೂಸು ಹುಟ್ಟಾದ ಮೇಲೆ ಕುಲಾವಿ ಹೊಲೆಯಬೇಕಲ್ಲ! ಸಿಂಗಾರವೂ ಮಾಡಿಯಾಯ್ತು. ಈಗಂತು ಬ್ಲಾಗ್ ತೆಗೆಯುವುದು ಆಕಳಿಸಿದಷ್ಟೇ ಸುಲಭ! ಅರ್ಧ ಘಂಟೆಯಲ್ಲಿ ರೆಡಿಯಾಗಿತ್ತು ನನ್ನ ಬ್ಲಾಗ್ ತಾಣ!

ನನ್ನ ಬ್ಲಾಗ್‍ಗೆ ಹೆಸರೇನಿಡಬೇಕೆಂದು ಕೆಲಕಾಲ ಯೋಚಿಸಿದ್ದಾಯ್ತು! ಮಗುವಿಗೆ ಹೆಸರಿಡುವಷ್ಟೇ ಕಷ್ಟ ಬ್ಲಾಗ್‍ಗೆ ಹೆಸರಿಡುವುದೂ ಕೂಡ ಅಂತ ಅರ್ಥವಾಯ್ತು. ಕೊನೆಗೆ "ಕಪ್ಪು-ಬಿಳುಪು" (Black & White) ಹೆಸರು ನನ್ನ ಬ್ಲಾಗ್‍ಗೆ ಸೂಕ್ತವೆನ್ನಿಸಿತು. ಇದೇ ಹೆಸರಿನ ಬ್ಲಾಗ್‍ಗಳು ಈಗಾಗಲೇ ಇರಬಹುದಲ್ಲವೇ ಎಂಬ ಗುಮಾನಿ ಕೂಡ ಬಂತು. ಇರಬಾರದೇಕೆ? ನನ್ನ ಹೆಸರಿನವರೇ ಸಾವಿರಾರು ಜನರಿರುವಾಗ, ನನ್ನ ಬ್ಲಾಗ್ ಹೆಸರಿನದೇ ಬ್ಲಾಗ್‍ಗಳು ಇದ್ದರೇನಾಯ್ತು? After all what's in a name ಅಂತ ಯಾವುದೋ ಪುಣ್ಯಾತ್ಮ ಹೇಳಿಲ್ಲವೇ?

ಇನ್ನು, ಇಲ್ಲಿ ಏನು ಬರೀತೀನಿ ಅಂತ ಇನ್ನು ಯೋಚಿಸಿಲ್ಲ. ಇಷ್ಟಂತೂ ಹೇಳಬಲ್ಲೆ. ನನಗೆ ಅಭಿರುಚಿಯಿರುವ ಎಲ್ಲ ವಿಷಯ / ಲಲಿತಕಲೆಗಳ ಬಗ್ಗೇನೂ ಆದಷ್ಟು ಬರೆಯುವ , ವಿಷಯ ಹಂಚಿಕೊಳ್ಳುವ ಯೋಚನೆ ಇದೆ. ನೋಡೋಣ. ಆ "ಸರ್ವಾಂತರ್ಯಾಮಿ" ನನ್ನ ಬ್ಲಾಗ್ ನೋಡಿ ಸುಸ್ತಾಗದೆ, ತಥಾಸ್ತು ಅಂದರೆ , ಎಲ್ಲವೂ ಸಾಧ್ಯ!

ನನ್ನ ಬಗ್ಗೆ ಬರೆಯಲು ನಾನೇನೂ "ಗ್ರೇಟ್" ವ್ಯಕ್ತಿ ಅಲ್ಲ. ಆದ್ದರಿಂದ ನನ್ನ ಬ್ಲಾಗ್‍ನಲ್ಲಿ ವ್ಯಕ್ತಿಗಿಂತ ವಿಚಾರಕ್ಕೆ ಮಹತ್ವ. ನನಗೆ ಹವ್ಯಾಸಗಳಿವೆ ಹಲವು. ಯಾವುದರಲ್ಲೂ expert ಆಗಲಿಲ್ಲವೆಂಬ ವಿಷಾದವೂ ಇದೆ. ಭಗವಂತನ ಕೃಪೆ, ಎಲ್ಲವನ್ನು ಅನುಭವಿಸುವ ಧೋರಣೆ ಇದೆ. ನನ್ನ ಹವ್ಯಾಸಗಳಲ್ಲಿ ಸಂಗೀತ ಮತ್ತು ಸಾಹಿತ್ಯಕ್ಕೆ ಹೆಚ್ಚು ಪ್ರಾಮುಖ್ಯತೆ. ಸಂಗೀತದಲ್ಲಿ ಎಲ್ಲಾ ಪ್ರಾಕಾರಗಳೂ, ಕಿವಿಗೆ ಇಂಪಾಗುವುದೆಲ್ಲವೂ ಸಖ್ಯ. ಕಥೆ, ಕವನ ಬರೆಯುವ "ಚಟ" ಕೂಡ ಇದೆ (ಅಂದರೆ ನಿಮಗೆ ಅಪಾಯ ಕಾದಿದೆ!!!).


ಈ ಬ್ಲಾಗ್ ಎಷ್ಟು ಅವಧಿಯಲ್ಲಿ update ಮಾಡುತ್ತೇನೆ ಗೊತ್ತಿಲ್ಲ. ಆದಷ್ಟೂ ಶೀಘ್ರಗತಿಯಲ್ಲಿ ( ಕನಿಷ್ಠ ತಿಂಗಳಿಗೊಮ್ಮೆ!) ಮಾಡುವ ಯೋಚನೆಯಿದೆ. ನನ್ನ ಬ್ಲಾಗ್ ತಾಣದಲ್ಲಿ ಇನ್ನು ಕೆಲವು "utilities" ಇದೆ. ನಿಮಗೆ ಇಷ್ಟವಾಗಬಹುದು.

ಸಿಗೋಣ,
ಗಿರೀಶ್ ಜಮದಗ್ನಿ

No comments: