Wednesday 5 November 2008

ಆ ದೇವರು ವರವನು ಕೊಟ್ರೇ....

ಒಬ್ಬ ಭಕ್ತ ದೇವರಿಂದ ವರವನ್ನು ಪಡೆಯಲು ವರುಷಗಳಿಂದ ತಪಸ್ಸು ಮಾಡುತ್ತಿದ್ದ. ಇಷ್ಟು ತಪಸ್ಸು ಮಾಡಿದ ಮೇಲೆ ದೇವರು ಪ್ರತ್ಯಕ್ಷವಾಗದೇ ಇರಲು ಸಾಧ್ಯವೇ? ಸರಿ, ದೇವರು ಬಂದು ಎದುರು ನಿಂತೇ ಬಿಟ್ಟ. ಭಕ್ತ ಇನ್ನೂ ತಪಸ್ಸಿನಲ್ಲೇ ಮಗ್ನ! ದೇವರು ನುಡಿದ " ಎಲೈ ಭಕ್ತನೇ, ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ. ಏಳು. ನಿನ್ನ ಬೇಡಿಕೆ ಏನು ಕೇಳು. ಆದರೆ, ಒಂದು ಷರತ್ತು. ನೀನು ಒಂದೇ ಒಂದು ಪ್ರಶ್ನೆಯನ್ನಷ್ಟೆ ಕೇಳಬಹುದು. ನೆನಪಿರಲಿ, ಒಂದೇ ಒಂದು ಪ್ರಶ್ನೆ!". ಭಕ್ತ ಕಣ್ಣು ಬಿಟ್ಟ. ಎದುರಿಗೆ ದೇವರು! ಸಂತೋಷ ತಡೆಯಲಾಗಲಿಲ್ಲ. ಕೇಳೇ ಬಿಟ್ಟ "ತಂದೆ...ನೀನು ಬಂದದ್ದು ನನಗೆ ತಿಳಿಯಲೇ ಇಲ್ಲ. ನೀ ಬಂದು ಎಷ್ಟು ಹೊತ್ತಾಯಿತು?" ದೇವರು, "ಮೂರು ಕ್ಷಣಗಳಾದವು ಅಷ್ಟೆ" ಎಂದು ಹೇಳಿ ಮಾಯವಾದ! ಭಕ್ತನ ಒಂದು ಪ್ರಶ್ನೆ ಮುಗಿದುಹೋಗಿತ್ತು!

ದೇವರು ಎದುರುಬಂದಾಗ ಭಕ್ತ ಕಕ್ಕಾಬಿಕ್ಕಿಯಗುವುದು ಊಹಿಸಬಹುದು ತಾನೆ? ದೇವರ ಹತ್ತಿರ ಅದೂ, ಇದೂ, ಏನೇನೊ ಕೇಳಬೇಕೆಂದು ಕೊಂಡಿದ್ದರೂ ಧಿಡೀರ್ ಅಂತ ಹಾಗೇನಾದರೂ ಅವನು ಎದುರು ಬಂದು ನಿಂತರೆ ನಾವು ಕೇಳಬೇಕೆಂದುಕೊಂಡದ್ದೆಲ್ಲಾ, ಮರೆತುಹೋಗಿ, ಇನ್ನೇನೋ ಕೇಳಿ, ಆಭಾಸವಾಗುವ ಸಾಧ್ಯತೆಗಳಿವೆಯಲ್ಲವೆ? ಇರಬಹುದೇನೋ, ಯಾಕೆಂದರೆ, ನನಗಂತೂ ಅದರ ಅನುಭವವೇ ಇಲ್ಲ!

ಒಬ್ಬ ಬುದ್ಧಿವಂತ, ಬಡ ಬ್ರಹ್ಮಚಾರಿ, ದೇವರು ಪ್ರತ್ಯಕ್ಷನಾದಾಗ, "ನನ್ನ ಸುಂದರ ಮರಿಮಗ, ಚಿನ್ನದ ಸುಪ್ಪತ್ತಿಗೆಯಲ್ಲಿ ಮಲಗಿ, ಚಿನ್ನದ ಚೊಂಬಿನಲ್ಲಿ ಹಾಲು ಕುಡಿಯುವಂತೆ ವರಕೊಡು" ಅಂತ ಕೇಳಿದಾಗ, ಆ ದೇವರೇ ಸುಸ್ತಾದನಂತೆ (ಜೋಕು!). ತನ್ನ ಖಾನ್‌ದಾನೇ ಚೆನ್ನಾಗಿರಲಿ ಅಂತ ಒಂದೇ ಮಾತಿನಲ್ಲಿ ಕೇಳಿದ್ದ. ವರ ಕೇಳುವುದಕ್ಕೂ ಬುದ್ಧಿ ಬೇಕು!

ಇಷ್ಟಾದರೂ ದೇವರು ಪ್ರತ್ಯಕ್ಷವಾದಾಗ ಏನೂ ಅಂತ ಕೇಳುವುದು? "ದೇವರೇ ನನ್ನನ್ನು ಚೆನ್ನಾಗಿಟ್ಟಿರು ತಂದೆ" ಅಂತಲೇ? ಈ "ಚೆನ್ನ" ಅಂದರೆ ಏನು? ಎಷ್ಟು? ಆ ದೇವರು, "ನೀನು ಈಗ್ಲೆ ಸಾಕಷ್ಟು ಚೆನ್ನಾಗಿದ್ದೀಯ, ನಿಂಗೇನಾಗಿದೆ ಧಾಡಿ" ಅಂತ ಹೇಳಿ ಅಂತರ್ಧಾನನಾದರೆ? ಅದರಲ್ಲೂ ದೇವರಂತಹ ಮಹಾನುಭಾವ ಎದುರಿಗೆ ಬಂದಾಗ, "ನನ್ನನ್ನು ಚೆನ್ನಾಗಿಟ್ಟಿರಪ್ಪ" ಅಂತ ಕೇಳಿ, ನನ್ನ ಸ್ವಾರ್ಥತನ ತೋರಿಸುವುದಕ್ಕಾಗುತ್ತದೆಯೆ? ದೇವರಿಗೆ ಈ ನನ್ನ narrow mindedness ಇಷ್ಟ ಆಗ್ದೇ ಕೋಪ ಮಾಡ್ಕೊಂಡು ಶಾಪ ಕೋಟ್ಬಿಟ್ರೆ? ಬೇಡ, "ಎಲ್ಲರನ್ನು ಚೆನ್ನಾಗಿಟ್ಟಿರಪ್ಪ" ಅಂತ universal ಆಗಿ ಕೇಳಿದ್ರೆ, "ಎಲ್ಲರನ್ನು ಚೆನ್ನಾಗಿಟ್ಟಿರು ಅಂತ ಕೇಳೋಕ್ಕೆ, ನೀನೇನು ಅವರ ಯೂನಿಯನ್ ಲೀಡರ್ರಾ?" ಅಂತ ಕೇಳಬಹುದಲ್ವಾ? ಅಲ್ದೇ ಅವನು ಸೃಷ್ಟಿ ಮಾಡಿರೋ ಯಾರೂ ಚೆನ್ನಾಗಿಲ್ಲ ಅಂತ ಅಪಾರ್ಥ ಮಾಡ್ಕೊಂಡ್ಬಿಟ್ರೆ? ಛೆ.. ವರ ಕೇಳೋದು ಹುಡುಗಾಟ ಅಲ್ಲ! ದೇವರ ಮನಸ್ಸಿಗೆ ನೋವು ಮಾಡದಲೇ ವರ ಕೇಳೋದು ಎಷ್ಟು ಕಷ್ಟ! ಸಿಕ್ಕಾಪಟ್ಟೆ ಪ್ರಿಪರೇಷನ್ ಬೇಕು!

ಇಷ್ಟಾದರೂ ನಮಗೆ ವರ ಬೇಕೇ? ಎಲ್ಲ ಪ್ರಾಣಿಗಿಂತಲೂ ಬುದ್ಧಿವಂತ ಪ್ರಾಣಿಯಾಗಿ ಮಾಡಿ, ಓಡಾಡಲು ಕಾಲು, ಕೆಲಸಮಾಡಲು ಕೈ, ನೋಡಲು ಕಣ್ಣು , ಕೇಳಲು ಕಿವಿ, ಉಸಿರಾಡಲು ಮೂಗು, ಮತ್ತೆ ಇವೆಲ್ಲಾ ಚೆನ್ನಾಗಿ ಕೆಲಸಮಾಡಲು ಮಿಕ್ಕ ಭಾಗಗಳನ್ನೆಲ್ಲ, ತುಂಬ ಮುತುವರ್ಜಿಯಿಂದ ಕೊಟ್ಟು, ಪ್ರತಿಯೊಬ್ಬರನ್ನೂ ವಿಶೇಷವಾಗಿ ಸೃಷ್ಟಿ ಮಾಡಿ ಭೂಮಿಗೆ ಕಳಿಸಿರುವ ಭಗವಂತನನ್ನು, ದಿನಾ ಪ್ರಾರ್ಥಿಸಿ ನನಗೆ ಅದು ಕೊಡು, ಇದು ಕೊಡು ಅಂತ ಪೀಡಿಸುವುದು ಸರಿಯೇ? Is it not asking for too much?
-ಗಿರೀಶ್ ಜಮದಗ್ನಿ

No comments: