Saturday, 28 March 2009

ವೈಫಲ್ಯದಿಂದ ಯಶಸ್ಸು!!

ಕಳೆದಬಾರಿ ನಾನು ಬೆಂಗಳೂರಿಗೆ ಹೋಗಿದ್ದು ಪರೀಕ್ಷೆಗಳ ಪಲಿತಾಂಶ ಪ್ರಕಟವಾಗುವ ಸಮಯದಲ್ಲಿ. ಯಾವುದೇ ದಿನ ಪತ್ರಿಕೆ ತಿರುವಿ ಹಾಕಿದರೂ, ಮುಖಪುಟದಲ್ಲಿ, ಮೊದಲ ರ್‍ಯಾಂಕ್ ಬಂದ ಹುಡುಗ / ಹುಡುಗಿ, ಅವರ ತಂದೆ ತಾಯಿಯ ಜೊತೆ ಸಿಹಿ ಹಂಚಿ, ಸಂತೋಷ ಪಡುತ್ತಿರುವ ಭಾವಚಿತ್ರ. ಅದೇ ಪತ್ರಿಕೆಯ ಒಳ ಪುಟಗಳಲ್ಲಿ, ನಪಾಸದ ಹುಡುಗ, ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡ ಸುದ್ಧಿಗಳು!

ನನ್ನ ಆಫೀಸ್ ಸ್ನೇಹಿತನೊಬ್ಬ ಅಮೇರಿಕಾದ ಯಾವುದೋ MBA ಕೋರ್ಸ್ ಪ್ರವೇಶ ಪರೀಕ್ಷೆ‌ಯಲ್ಲಿ ಅನುತ್ತೀರ್ಣನಾಗಿದ್ದ. ಆ ಫಲಿತಾಂಶದಿಂದ ತತ್ತರಿಸಿಹೋಗಿದ್ದ. ನಾಲಕ್ಕು ದಿನ ಅದನ್ನೆ ಯೋಚನೆ ಮಾಡುತ್ತಾ ಆಫೀಸ್ ಬರಲೇ ಇಲ್ಲ. ನನಗೊಂದಿಷ್ಟು ಬಾರಿ ಫೋನ್ ಕೂಡ ಮಾಡಿದ್ದ. ಅವನು ಆ ಪರೀಕ್ಷೆಯಲ್ಲಿ ಪಾಸ್ ಆಗೆ ಆಗುತ್ತೆ, ಉತ್ತಮ ಯೂನಿವರ್ಸಿಟಿ‌ಯಲ್ಲಿ ಅವನಿಗೆ ಸೀಟು ಸಿಕ್ಕೇ ಸಿಗುತ್ತೆ ಎಂಬ ನಂಬಿಕೆ‌ಯಿಂದಿದ್ದ. ಆ ಸೋಲಿನಿಂದ ಖಿನ್ನನಾಗಿದ್ದ. ಆವನಿಗೆ ಅ ಸೊಲನ್ನು ಎದುರಿಸಲು, ಒಪ್ಪಿಕೊಳ್ಳಲು ಬಹಳ ದಿನಗಳೇ ಹಿಡಿದವು!

ಮೊನ್ನೆ ದಿನ, ಇನ್ನೊಂದು ಸುದ್ದಿ ಇಂಟರ್ನೆಟ್‌ನಲ್ಲಿ ಓದಿದೆ. ಒಂದು ರಿಯಾಲಿಟಿ ಶೊ ಹಾಡಿನ ಸ್ಪರ್ಧೆಯಲ್ಲಿ, ಭಾಗವಹಿಸಿದ ಹುಡುಗಿ, ತೀರ್ಪುಗಾರರ ಅಭಿಪ್ರಾಯ ಮತ್ತು ತನ್ನ ಕಳಪೆ ಪ್ರದರ್ಶನದಿಂದ ಬುಧ್ಧಿಭ್ರಮಣೆಗೆ ಒಳಗಾಗಿದ್ದು. ಈಗಲೂ ಆ ಮುದ್ದು ಹುಡುಗಿ, ಬೆಂಗಳೂರಿನ NIMHANS ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಇದೆಲ್ಲ ನೋಡಿದರೆ, ಎಂತ ವಿಪರ್ಯಾಸ ಅನ್ನಿಸಿತು! ಗೆಲುವಿಗೆ ಎಷ್ಟೊಂದು ಮಹತ್ವ! ಆದರೆ ಸೋಲಿಗೆ? ಸೋಲಿನ ಮಹತ್ವ ಅರಿಯಬೇಕಾದರೆ, ಒಮ್ಮೆ ಸೋತು ನಂತರ ಗೆದ್ದವನನ್ನೇ ಕೇಳಬೇಕು! ಒಂದು ಗೆಲುವಿಗೆ ಎಷ್ಟು ಕಾರಣಗಳೋ, ಸೋಲಲೂ ಕೂಡ ಅಷ್ಟೇ ಕಾರಣಗಳು. ವ್ಯಕ್ತಿಯ ನಿಜವಾದ ವ್ಯಕ್ತಿತ್ವದ ಪರಿಚಯವಾಗುವುದು ಅವನು ಸೋಲನ್ನು ಕಂಡಾಗಲೇ ! ಅದರಲ್ಲಿ ಬಹಳ ಮುಖ್ಯವಾದದ್ದು ವ್ಯಕ್ತಿಯ ಮನೋಭಾವನೆ. ಸೋಲನ್ನು ಸ್ವೀಕರಿಸುವ ಮನೋಭಾವನೆ. ಒಮ್ಮೆ ಸೋತರೂ, ಇನ್ನೊಮ್ಮೆ ಪ್ರಯತ್ನಿಸಬೇಕೆಂಬ ಮನೋಭಾವನೆ.

ಆದರೆ, ನಮ್ಮ ಈಗಿನ ಶಿಕ್ಷಣದ (ಅ)ವ್ಯವಸ್ಥೆಯಲ್ಲಿ, ಒಳ್ಳೆ ಮನೋಭಾವನೆ ಬೆಳೆಸಿಕೊಳ್ಳುವ, ಜೀವನವನ್ನು ಹೇಗೆ ಜೀವಿಸಬೇಕೆಂಬ ಪಾಠಗಳಿರುವುದಿಲ್ಲವಲ್ಲ! ಹಾಗೆ, ನಮ್ಮ, ಅಂದರೆ ಪೋಷಕರ ಚಿಂತನೆ, ನಾವು ಬದುಕನ್ನು ನೋಡುವ ಪರಿ, ನಮ್ಮ ಮಕ್ಕಳಿಗೆ ನಾವು ನೀಡುವ ಮಾರ್ಗದರ್ಶನದಲ್ಲೂ ಎಲ್ಲೋ ಲೋಪವಿದೆ ಅನ್ನಿಸುತ್ತದೆ.

ಜೀವನದಲ್ಲಿ ಯಶಸ್ಸು ಬಹಳ ಮುಖ್ಯ. ಆದರೆ, ನಮ್ಮ ಮಕ್ಕಳಿಗೆ ಯಾವಾಗಲೂ ನಾವು ಯಶಸ್ಸಿನ ಬಗ್ಗೆಯೇ ಹೇಳೀ, ಹೇಳೀ, ಅವರಿಗೆ ಜೀವನದಲ್ಲಿ ಯಶಸ್ಸು ಬಿಟ್ಟು ಬೇರ್‍ಏನಿಲ್ಲ ಎನ್ನುವ ಒಂದು ಸುಳ್ಳು ಪ್ರಪಂಚದ ಸೃಷ್ಟಿ ಮಾಡುತ್ತೇವಲ್ಲವೆ? ಎಲ್ಲರ ಮಕ್ಕಳೂ ಮೊದಲನೆ ರ್‍ಯಾಂಕ್ ಬರಲು ಸಾಧ್ಯವಿಲ್ಲ! ಹಾಗೇ, ಎಲ್ಲರ ಬುದ್ಧಿಮತ್ತೆ ಮತ್ತು ಗ್ರಹಣ ಶಕ್ತಿ ಒಂದೇ ಸಮ ಇರುವುದಿಲ್ಲ. ನಾವು ಅವರ ತಲೆಯಲ್ಲಿ ಬಿಡುವ ಯಶಸ್ಸಿನ ಹುಳ, ಅವರಿಗೆ ಒಳ್ಳೆಯದು ಮಾಡುವುದಕ್ಕಿಂತ ಹಾನಿ ಮಾಡುವುದೇ ಹೆಚ್ಚು. ಸೋತವರಿಗೆ, ವೈಫಲ್ಯತೆಯ ಹೆದರಿಕೆಗಿಂತ ಅದು ತರುವ ಮುಂದಿನ ಪರಿಣಾಮಗಳೇ ಭಯಾನಕ. ಅಕಸ್ಮಾತ್ ಅವರು ಯಶಸ್ಸು ಕಾಣುವ ಬದಲು, ಅವರ ಪ್ರಯತ್ನದಲಿ ವಿಫಲವಾದರೆ, ಅವರಿಗೆ ಏನು ಮಾಡಬೇಕೆಂದು ಗೊತ್ತಿರುವುದಿಲ್ಲ! ಯಾಕೆಂದರೆ, ವಿಫಲವಾದರೆ ಏನು ಮಾಡಬೇಕೆಂದು ಅವರಿಗೆ ನಾವು ಹೇಳಿ ಕೊಡುವುದೇ ಇಲ್ಲ! ವೈಫಲ್ಯವನ್ನು ಎದುರಿಸಲು ಅವರ ಮನಸ್ಸನ್ನು ಸಿಧ್ಧ ಮಾಡುವುದಿಲ್ಲ. ಇದು ತಪ್ಪಲ್ಲವೆ? ನನ್ನ ಮಗ / ಮಗಳು ಮಾಡಿದ್ದೆಲ್ಲದರಲ್ಲೂ ಯಶಸ್ಸು ಕಾಣಲೆಂಬುದು ಪೋಷಕರ ಹುಚ್ಚು ಹಂಬಲ! ಇದು ತಪ್ಪಲ್ಲ. ಆದರೆ, ಯಾವಾಗಲೂ ಇದು ಸಾಧಿಸಲಾಗುವುದಿಲ್ಲ.

ಹಾಗಾದರೆ, ನಮ್ಮ ಮಕ್ಕಳಿಗೆ ವೈಫಲ್ಯವನ್ನು ಎದುರಿಸುವ ಬಗ್ಗೆ ಹೇಗೆ, ಯಾವಾಗ , ಎಷ್ಟು ಹೇಳಿಕೊಡಬೇಕು? ಅವರು ವಿಫಲವಾಗುವ ಮುನ್ನ? ಅಥವಾ, ವೈಫಲ್ಯವನ್ನು ಕಂಡು, ನನ್ನ ಜೀವನವೇ ಮುಗಿಯಿತು, ನಾನು ಅಪ್ರಯೋಜಕ ಅಂತ ಛಿದ್ರವಾದ ಮನಸ್ಸಿನಿಂದ ಕಂಗೆಟ್ಟು ಹೋದ ಮೇಲಾ? ಬಹಳ ಕ್ಲಿಷ್ಟವಾದ ಪ್ರಶ್ನೆ! ಇದಕ್ಕೆ ಉತ್ತರ ಪ್ರತಿ ತಂದೆ ತಾಯಿಯರು ಆದಷ್ಟು ಬೇಗ ಕಂಡುಕೊಳ್ಳಬೇಕು. ಏಕೆಂದರೆ, ಪ್ರತಿ ಮಗುವೂ ವಿಶಿಷ್ಟ. ಮಗು ಏನನ್ನು, ಹೇಗೆ, ಸ್ವೀಕರಿಸುತ್ತದೆ ಎಂಬುದು ಬೇರೆಯವರಿಗಿಂತ ತಂದೆ ತಾಯಿಗಳಿಗೇ ಹೆಚ್ಚು ಗೊತ್ತಿರಲು ಸಾಧ್ಯ.

ಇಷ್ಟಂತೂ ಹೇಳಿಕೊಡುವುದು ಅಥವ ಕಲಿತುಕೊಳ್ಳುವುದು ಅವಶ್ಯ. ಯಶಸ್ಸು ಮತ್ತೆ ವೈಫಲ್ಯ ಎರಡೂ ಶಾಶ್ವತವಲ್ಲ! ಪ್ರತಿಯೊಬ್ಬ ಮನುಷ್ಯನಿಗೂ ಅವನ ಜೀವನದಲ್ಲಿ ಆಗಾಗ ಸೋಲನ್ನು ಅನುಭವಿಸಲೇಬೇಕಾಗುತ್ತದೆ. ಇದು ಕಹಿಯಾದರೂ ಸತ್ಯ! ಸೋಲಿಗೆ ಹೆದರದಿರುವುದನ್ನು ಕಲಿತುಕೊಳ್ಳಬೇಕು ಅಥವ ಕಲಿಸಬೇಕು. ಸೋಲಿಗೆ ಹೆದರುವುದು ನಿಂತರೆ, ಮುಂದಿನ ದಾರಿ ಸುಗಮ. ವಿಫಲವಾದಾಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವುದಕ್ಕಿಂತ, ಏನು ಮಾಡಿದ್ದರೆ ಯಶಸ್ಸು ಸಿಗುತ್ತಿತ್ತು ಎನ್ನುವ ಆತ್ಮಾವಲೋಕನ ಅಗತ್ಯ. ಎಲ್ಲಿ ತಪ್ಪಿದ್ದು ಎಂದು ಅರಿತರೆ, ಮತ್ತೆ ಅದೇ ತಪ್ಪನ್ನು ಮಾಡುವ ಸಾಧ್ಯತೆ ಕಮ್ಮಿ ಹಾಗು ಯಶಸ್ಸಿನ ಮೆಟ್ಟಿಲಿಗೆ ಹತ್ತಿರವಾಗುವುದು ಖಂಡಿತ. ಪ್ರತಿ ಪ್ರಯತ್ನವನ್ನು ಒಂದು ಕಲಿಕೆ ಎಂದು ಪರಿಗಣಿಸಿದರೆ, ಸೋಲಿನಲ್ಲೂ ಜಯ ಸಾಧಿಸಿದಂತಾಗುತ್ತದೆ! ಹಾಗೆ, ಪರಿಶ್ರಮವಿಲ್ಲದೇ ಯಶಸ್ಸಿನ ಕೈ ಕುಲುಕಲು ಸಾಧ್ಯವಿಲ್ಲ. ಪರಿಶ್ರಮವಿರಬೇಕು ಹಾಗೂ, ತನ್ನ ಸಾಮರ್ಥ್ಯದಲ್ಲಿ ನಂಬಿಕೆಯಿರಬೇಕು. ಅರ್ಧಮನಸ್ಸಿನ ಪ್ರಯತ್ನದ ಪಲಿತಾಂಶ ಯಾವಾಗಲೂ ಅರ್ಧವೇ !

ಸೋತು ಗೆದ್ದವರ ಉದಾಹರಣೆಗಳು ಈ ಪ್ರಪಂಚದಲ್ಲಿ ಹೇರಳವಾಗಿ ಸಿಗುತ್ತವೆ. ಆಗಾಗ ಅಂತ ಮಹಾನುಭಾವರ ಆತ್ಮ ಚರಿತ್ರೆಯನ್ನು ಓದುವುದು ಅಥವಾ ಅವರ ಯಶಸ್ಸಿನ ಗುಟ್ಟನ್ನು ಅರಿಯುವುದು ನಮ್ಮ ಜೀವನಕ್ಕೆ ಉತ್ತಮ ಮಾರ್ಗದರ್ಶಿಯಾಗಬಲ್ಲದು.

ಎಲ್ಲದಕ್ಕಿಂತ ಮುಖ್ಯವಾಗಿ, ಸೋಲಿನ ನಂತರ ಪ್ರಯತ್ನವನ್ನು ನಿಲ್ಲಿಸದಿರುವುದು. ವಿಙ್ನಾನಿ ಥಾಮಸ್ ಆಳ್ವ ಎಡಿಸನ್ ಮತ್ತೆ ಅವನ ಸಂಗಡಿಗರು, ವಿದ್ಯುತ್ ದೀಪ ಕಂಡುಹಿಡಿಯುವಾಗ, ಸಾವಿರ ಬಾರಿ ಪ್ರಯತ್ನಿಸದೆ, ಮೊದಲನೇ , ಎರಡನೇ ಅಥವಾ ಹತ್ತನೆ ಸೋಲಿಗೇ ಕೈ ಚೆಲ್ಲಿ ಕುಳಿತಿದ್ದರೆ ವಿದ್ಯುತ್ ದೀಪದ ಅನ್ವೇಷಣೆ ಅಲ್ಲಿಗೆ ಕೊನೆಗೊಳ್ಳುತ್ತಿತ್ತೋ ಏನೋ! ಅವರ ಪ್ರಯತ್ನ ಸಾವಿರದೊಂದನೇ ಬಾರಿ, ಫಲಕಾರಿಯಾದಾಗ ಆಳ್ವ ಎಡಿಸನ್ ಹೇಳಿದ್ದೇನು ಗೊತ್ತೇ? "ನನಗೀಗ ವಿದ್ಯುತ್ ದೀಪ ಹೇಗೆ ಮಾಡಬಾರದೆಂಬ ಸಾವಿರ ವಿಧಾನಗಳು ಗೊತ್ತಿದೆ!". SLV-3 ರಾಕೆಟ್‌ನ ಮೊದಲ ಉಡಾವಣೆ ವಿಫಲವಾದಾಗ, ಅಬ್ದುಲ್ ಕಲಾಮ್ ಮತ್ತು ಅವರ ಸಹ ವಿಙ್ನಾನಿಗಳು ಹತಾಶರಾಗಿ, ಅವರ ಪ್ರಯತ್ನ ಅಲ್ಲಿಗೇ ನಿಲ್ಲಿಸಿದ್ದರೆ, ಭಾರತ ಇಂದು, ಉಪಗ್ರಹ ಉಡಾವಣೆ ತಂತ್ರಙ್ನಾನದಲ್ಲಿ, ಇಷ್ಟು ಬೆಳೆಯಲು ಸಾಧ್ಯವಾಗುತ್ತಿರಲೇ ಇಲ್ಲ.

ಕೊನೆಯದಾಗಿ, ಮಾಲ್ಕಮ್ ಫ಼್ಹೊರ್ಬ್ಸ್ ಹೇಳಿರುವಂತೆ, ಸೋಲಿನಿಂದ ಪಾಠ ಕಲಿತರೆ, ಆ ಸೋಲೂ ಕೂಡ ಯಶಸ್ಸೇ ಸರಿ !

ಓದುಗರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಈ ವಿರೋಧಿನಾಮ ಸಂವತ್ಸರ ನಿಮಗೆಲ್ಲರಿಗೂ ಅನುಕೂಲವಾಗಿರಲೆಂದು ಹಾರೈಸುತ್ತೇನೆ.

- ಗಿರೀಶ್ ಜಮದಗ್ನಿ
girish.jamadagni@gmail.com

2 comments:

ಸಿಮೆಂಟು ಮರಳಿನ ಮಧ್ಯೆ said...

ನಮ್ಮ ದೇಶದ ಶಿಕ್ಷಣ ಪದ್ಧತಿ ಸರಿ ಇಲ್ಲ...
ಬ್ರಿಟಿಷರಿಗೆ "ಗುಮಾಸ್ತರು" ಬೇಕಿತ್ತು..
ನಾವೂ ಅದನ್ನೆ ಸ್ವಲ್ಪ ಸುಧಾರಿಸಿ ಕಲಿಸುತ್ತಿದ್ದೇವೆ...

ಬದುಕಿದೆ ಬೇಕಾದ ಮೂಲಭೂತ ತತ್ವವನ್ನು ಹೇಲಿಕೊಡುವದೇ ಇಲ್ಲ...

ಡಿಗ್ರಿ ಮುಗಿದ ಮೇಲೂ ಹುಡುಗರಲ್ಲಿ "ಆತ್ಮವಿಶ್ವಾಸ" ಕಾಣುವದಿಲ್ಲ...

ಮಾನಸಿಕವಾಗಿ ನೌಕರಿ(ಗುಮಾಸ್ತ) ನಾಗಲು ತಯಾರಾಗಿರುತ್ತಾನೆ..

ಅಲ್ಲವೇ..?

(ನಿಮ್ಮ ಲೇಖನದಲ್ಲಿರುವದು ಬೇರೆ.., ನಾನು ಹೇಳುತ್ತಿರುವದು ಬೇರೆ...
ಕ್ಷಮೆ ಇರಲಿ...)

ನಿಮ್ಮ ಲೇಖನ ಇಷ್ಟವಾಯಿತು..
ನೀವು ಹೇಳಿದುದೆಲ್ಲ ಸತ್ಯ...

ಧನ್ಯವಾದಗಳು

HAPPY "UGAADI"

ಮನಸು said...

ಸರ್,
ಮೊದಲಿಗೆ ನಿಮಗೂ ಹಾಗು ನಿಮ್ಮ ಕುಟುಂಬದವರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು..
ನಿಮ್ಮ ಲೇಖನ ತುಂಬಾ ಹಿಡಿಸಿತು ವಾಸ್ತವ ಜೀವನದ ಬಿಂಬವಾಗಿದೆ... ನಾವು ನಮ್ಮ ಮಕ್ಕಳಿಗೆ ಸೋಲು ಗೆಲುವು ಎರಡನ್ನು ಸ್ವೀಕರಿಸುವ ಶಕ್ತಿ ಹಾಗು ಮನ್ಸ್ತೈರ್ಯವನ್ನು ರೂಡಿಘತ
ಮಾಡುವುದನ್ನು ಕಲಿಸಬೇಕು..
ಸೋಲೇ ಮುಂಬರುವ ಯಶಸ್ಸಿನ ಗುಟ್ಟು..
ಧನ್ಯವಾದಗಳು..