Tuesday 21 October 2008

ನಿದ್ದೆ ಬಲ್ಲವನಿಗೆ ರೋಗವಿಲ್ಲ !

ಆಶ್ಚರ್ಯದ ಸಂಗತಿಯೆಂದರೆ, ನಮ್ಮ ಜೀವನದ ಸುಮಾರು ೩೦ ಪ್ರತಿಶತ ಆಯಸನ್ನು ನಿದ್ದೆಯಲ್ಲೇ ಕಳೆಯುತ್ತೇವೆ. ಆದರೂ ನಿದ್ದೆ ಬಗ್ಗೆ ಆಲಸ್ಯ ನಮಗೆ! ಅಂದರೆ, ನಿದ್ದೆಯ ಮಹತ್ವ ತಿಳಿದುಕೊಳ್ಳಲು ಹೋಗುವುದೇ ಇಲ್ಲ ನಾವು. "ಚಿಂತೆಯಿಲ್ಲದವನಿಗೆ, ಸಂತೆಯಲ್ಲೂ ನಿದ್ದೆ ಬರುತ್ತೆ" ಎನ್ನುವುದು ಗಾದೆ ಮಾತು. ಎಲ್ಲಿ , ಹೇಗೆ, ಯಾವಾಗ ಬೇಕಾದರೂ ನಿದ್ದೆ ಮಾಡಿಬಿಡುವ ಜನರಿದ್ದಾರೆ. ಯಾಕೆ, ಗಿಜಿಗುಟ್ಟುವ ಕಚೇರಿಯಲ್ಲೇ ಸಲೀಸಾಗಿ ಗಂಟೆಗಟ್ಟಳೆ ನಿದ್ದೆ ಮಾಡುವ ಮಹಾನುಭಾವರಿಲ್ಲವೆ ನಮ್ಮಲ್ಲಿ? ಅವರಿಗೆಲ್ಲ ಒರಗಿಕೊಳ್ಳಲು ಜಾಗ ಬೇಕು ಅಷ್ಟೆ. ಜನಜಂಗುಳಿ ಇರಲಿ, ಸದ್ದು ಗದ್ದಲವಿರಲಿ, ದೀಪವಿರಲಿ, ವಾದ್ಯವಿರಲಿ, ಉಹುಂ. ತೊಂದರೆಯೇ ಇಲ್ಲ. ಪೊಗದಸ್ತಾಗಿ ನಿದ್ದೆ ಮಾಡಿಬಿಡುತ್ತಾರೆ. ನಿಜವಾಗಲೂ ಈ ಗುಂಪಿನ ಜನ ತುಂಬಾ ಪುಣ್ಯವಂತರು.

ಹಲವರಿಗೆ, ನಿದ್ದೆ ಬರಲು ಸುಮಾರು ಕಂಡಿಷನ್ನುಗಳು! ದೀಪವಿರಬಾರದು-ಗಾಢಾಂದಕಾರದಲ್ಲೇ ಮಲಗಿ ಅಭ್ಯಾಸ. ಸದ್ದಿರಬಾರದು -ಸೊಳ್ಳೆ ಗುಯ್ಗುಡುವ ಸದ್ದೂ ಅವರ ನಿದ್ದೆಗೆ ಶತ್ರು! ಕೆಲವರಿಗೆ ತಮ್ಮ ಗೊರಕೆ ಸದ್ದಿಗೇ ಎಚ್ಚರಾಗಿ ಧಿಗ್ಗನೆದ್ದು ಕುಳಿತುಬಿಡುವ ಪರಿಸ್ತಿತಿ! ಕೆಲವರಿಗೆ, ನಿದ್ದೆ ಬರಲು ಏನಾದರೂ ಸದ್ದಿರಲೇಬೇಕು! (ಕಮಲ್ ಹಾಸನ್‌ನ "ಪುಷ್ಪಕ ವಿಮಾನ" ಚಿತ್ರ ನೋಡಿದವರಿಗೆ ಙ್ನಾಪಕ ಇರಬಹುದು). ಹೊಸ ಜಾಗವಾದರೆ ನಿದ್ದೆ ಬರುವುದಿಲ್ಲ. ದಿಂಬಿನ ಎತ್ತರ ಇಂತಿಷ್ಟೇ ಇರಬೇಕು, ಹೆಚ್ಚು ಅಥವಾ ಕಮ್ಮಿಯಾದರೆ, ನಿದ್ದೆಗೇ ಆಪತ್ತು. ಆಕಾಶ ನೋಡುತ್ತ ಮಲಗುವ ಭಂಗಿಯಲ್ಲಿ ನಿದ್ದೆ ಬರುವುದಿಲ್ಲ! ಹೊಟ್ಟೇ ಮೇಲೇ ಮಲಗಬೇಕು. ಅದೂ ಲಂಕೆಯತ್ತ ಹಾರುತಿರುವ ಹನುಮಂತನ ಪೋಸಿನಲ್ಲಿ! ಇನ್ನೂ ಕೆಲವರಿಗೆ, ನಿದ್ದೆ ಬರಲು, ಕೈಯಲ್ಲಿ ಏನಾದರೂ ಪುಸ್ತಕವಿರಲೇಬೇಕು. ಇಲ್ಲದಿದ್ದರೆ ನಿದ್ದೆ ಬರುವುದಿಲ್ಲ. ಪುಸ್ತಕವಿದ್ದರೆ, ಮೊದಲ ಪುಟ ಓದಿಮುಗಿಸುವ ಮೊದಲೇ ಗಾಢನಿದ್ದೆ!

ಇದೆಲ್ಲ ನಾವೇ ಕಲಿತಿರುವ (ಕೆಟ್ಟ) ಅಭ್ಯಾಸಗಳು, ಮಾನಸಿಕ ಸಂಕೋಲೆಗಳು. ಹುಟ್ಟಿದ ಮಗು ಎಲ್ಲಾದರೂ , ಹೇಗಾದರೂ ನಿದ್ದೆ ಮಾಡಿಬಿಡುತ್ತವೆ. ಯಾವ ಕಂಡೀಷನ್‍ಗಳೂ ಇಲ್ಲದೇ!

ನಿದ್ದೆ ಬರದಿರಲು ಹಲವು ಕಾರಣಗಳಿರಬಹುದು. ಕೆಲವರಿಗೆ ಸ್ವಭಾವತಹ ನಿದ್ದೆ ಕಮ್ಮಿ. ಪರಿಸ್ತಿತಿ ಉಲ್ಭಣವಾದರೆ, ಇದೊಂದು ವ್ಯಾಧಿ (Insomnia!). ಅತೀನಿದ್ದೆ ಮಾಡುವುದೂ ಒಂದು ಖಾಯಿಲೆಯೇ( Hypersomnia). ಅದರೆ ಬಹಳ ಜನಕ್ಕೆ ಇದರ ಬಗ್ಗೆ ತಿಳುವಳಿಕೆಯೇ ಇರುವುದಿಲ್ಲ. ಮನುಷ್ಯನಿಗೆ, ಸಾಮಾನ್ಯವಾಗಿ ೬ ರಿಂದ ೮ ಘಂಟೆಯ ಕಾಲ ನಿದ್ದೆ ಸಾಕೆಂದು ವಿಙ್ನಾನಿಗಳ ಅಂಬೋಣ. ಹುಟ್ಟಿದ ಮಗು ಸರಸರಿ ೨೨ ಘಂಟೆ ಕಾಲ ಮಲಗುತ್ತದೆ. ಬೆಳೆಯುತ್ತ ಹೋದಂತೆ, ನಿದ್ದೆ ಅವಧಿ ಕಮ್ಮಿ ಆಗಿ ೮ ಘಂಟೆಯಾಗುತ್ತದೆ. ವಯಸ್ಸಾದಂತೆ, ನಿದ್ದೆಯ ಅವಧಿ ಇನ್ನೂ ಕಡಿಮೆಯಗುತ್ತದೆ. ವಯಸ್ಸಾದವರ ಗತಿ ನಿಜವಾಗಲೂ ಚಿಂತಾಜನಕ. ಮಾಡಲು ಕೆಲಸವಿಲ್ಲ (ಮಾಡಿದರೆ ಬೇರೆಯವರು ಒಪ್ಪಬೇಕಲ್ಲ!), ನಿದ್ದೆ ಬರುವುದಿಲ್ಲ. ಕಾಲಕಳೆಯುವುದು ಚಿತ್ರಹಿಂಸೆ.

ನಿದ್ದೆಯೆಂಬ ಪ್ರಕ್ರಿಯೆ, ಪ್ರಕೃತಿ ನಮಗೆ ನೀಡಿರುವ ಮದ್ದು. ಅದನ್ನು ಸರಿಯಾಗಿ ಬಳಸಿಕೊಂಡರೆ, ದೇಹಕ್ಕೆ, ಮನಸ್ಸಿಗೆ ಬೇಕಾದ ವಿಶ್ರಾಂತಿ ದೊರಕುತ್ತದೆ. ಅತಿಯಾದರೆ ಅಥವಾ ಕಮ್ಮಿಯದರೆ, ಸಮತೋಲನ ತಪ್ಪಿ, ಇಲ್ಲ ಸಲ್ಲದ ಖಾಯಿಲೆಗೆ ಆಹ್ವಾನ ನೀಡಿದಂತಾಗುತ್ತದೆ. ಆದ್ದರಿಂದ, ನಿದ್ದೆಯ ಬಗ್ಗೆ ಎಚ್ಚರವಿರಲಿ!

ಅರೆ, ಇದೇನು, ನಿದ್ದೆ ಮಾಡಿಬಿಟ್ರಾ?

- ಗಿರೀಶ್ ಜಮದಗ್ನಿ

No comments: