Friday 31 October 2008

ನಿಜವಾದ ಸತ್ಯ!

"ನಾನು ಸತ್ಯವನ್ನೇ ಹೇಳುತ್ತೇನೆ. ಅಕಸ್ಮಾತ್ ಇನ್ನೇನಾದರು ಹೇಳಿದರೂ, ಅದು ಸುಳ್ಳೇ ಹೊರತು ಬೇರೇನೂ ಅಲ್ಲ"! ಕಟಕಟೆಯಲ್ಲಿ ನಿಂತ ಅಪರಾಧಿ ಪ್ರಮಾಣ ತೆಗೆದುಕೊಂಡಿದ್ದು ಕೇಳಿ, ತಕ್ಕಡಿ ಪಕ್ಕ ಕುಳಿತ ಜಡ್ಜ್ ಬೆಪ್ಪಾದ!
"I always tell the truth, even when I lie" ಎಂಬುದು ಹಳೇ ಕೊಂಕು ಮಾತು. ಪ್ರತಿ ನಿತ್ಯದ ಜೀವನದಲ್ಲಿ, ನಾವು ಸತ್ಯ-ಸುಳ್ಳಿನ ಸಂಧಿಗ್ಧಕ್ಕೆ ಸಿಕ್ಕಿಹಾಕಿಕೊಳ್ಳುತ್ತೇವೆ. ಯಾವುದನ್ನು, ಎಷ್ಟು, ಯಾವಾಗ, ಯಾರಿಗೆ ಹೇಳಬೇಕು ಎನ್ನುವುದು ನಿಜಕ್ಕೂ ಕಲಿಯಬೇಕಾದ ಕಲೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ, ಸ್ನೇಹಕ್ಕೆ, ಸಂಬಂಧಕ್ಕೆ ಧಕ್ಕೆ! ಹಲವು ಸಾರಿ ಸತ್ಯವನ್ನು ಹೇಳಬೇಕಿನಿಸಿದರೂ ಯಾವುದೋ ದಾಕ್ಷಿಣ್ಯಕ್ಕೆ ಸಿಕ್ಕಿ, ಹೇಳಲಾಗದೆ, ಹೇಳದಿರಲಾಗದೆ ತೋಳಲಾಡುತ್ತೇವೆ.

"ಸತ್ಯಂ ಭ್ರೂಯಾತ್ ಪ್ರಿಯಮ್ ಭ್ರೂಯಾತ್, ನ ಭ್ರೂಯಾತ್ ಸತ್ಯಮಪ್ರಿಯಂ" ಎನ್ನುವುದು ಸಂಸ್ಕೃತದ ಒಂದು ಸುಭಾಷಿತ. ಅಂದರೆ, ಸತ್ಯವನ್ನು ಹೇಳಿದರೆ, ಪ್ರಿಯವಾದ, ಹಿತವಾದ ಸತ್ಯವನ್ನು ಹೇಳು, ಅಪ್ರಿಯವಾದ, ಅಹಿತವಾದ ಸತ್ಯವನ್ನು ಹೇಳಬೇಡ ಎಂದು. ನಮ್ಮ ಪೂರ್ವಜರು ಬುದ್ಧಿವಂತರು. ಬರಿ ಇಷ್ಟಕ್ಕೇ ನಿಲ್ಲಿಸಲಿಲ್ಲ. ಮುಂದುವರಿದು ಹೇಳಿದರು - "ಪ್ರಿಯಂ ಚ ನಾನೃತಮ್ ಭ್ರೂಯಾತ್, ಏಷ ಧರ್ಮ ಸನಾತನಹ". ಅಂದರೆ, ಮುಂದೆ ನಿಂತ್ಕೊಂಡು ಕೇಳ್ತಾಯಿರುವವನಿಗೆ ಭಯಂಕರ ಖುಶಿಯಗುತ್ತೆ ಅಂತ ಹಿತವಾದ ಸುಳ್ಳುಗಳನ್ನೂ ಹೇಳಬೇಡ!

ಸತ್ಯ ಹೇಳುವುದು ತಪ್ಪೇ? "ಸತ್ಯವಂತರಿಗಿದು ಕಾಲವಲ್ಲ" ಅಂತ ಪುರಂದರದಾಸರು, ಎಚ್ಚರಿಸಿದ್ದರೂ ಕೂಡ, ಸತ್ಯವನ್ನಾಡುವುದು ಖಂಡಿತ ತಪ್ಪಲ್ಲ! ಆದರೆ, ಒಬ್ಬರಿಗೆ ನೋವಾಗುವಂತ ಸತ್ಯವನ್ನು ಹೇಳುವಾಗ ಸ್ವಲ್ಪ ಎಚ್ಚರವಹಿಸುವುದು ಉತ್ತಮ. ನಮ್ಮ ಎರಡು ಮಾತು, ಸತ್ಯವೇ ಇದ್ದರೂ, ಒಳ್ಳೆಯದು ಮಾಡುವುದಕ್ಕಿಂತ, ಹಾನಿಯೇ ಹೆಚ್ಚು ಮಾಡುವುದಾದರೆ, ಅ ಸತ್ಯ ಹೇಳುವುದಕ್ಕಿಂತ ಸುಮ್ಮನಿರುವುದು ಲೇಸು. ರೋಗದಿಂದ ಹಾಸಿಗೆ ಹಿಡಿದು ಮಲಗಿದ ವ್ಯಕ್ತಿಗೆ, ವೈದ್ಯ, ಸತ್ಯ ಹೇಳ್ತೀನಿ ಅಂತ "ನೀನು ಅಬ್ಬಬ್ಬ ಅಂದರೆ, ಇನ್ನೊಂದು ವಾರ ಬದುಕ್ತೀಯ ಅಷ್ಟೆ" ಅಂದರೆ, ವಾರ ಆದ್ಮೇಲೆ ಸಾಯಬೇಕಿದ್ದ ಪಾರ್ಟಿ, ಈ ಮಾತು ಕೇಳಿದ ತಕ್ಷಣ ಪರಲೋಕ ಸೇರಿದರೆ, ಏನು ಸಾಧಿಸಿದಂತಾಯ್ತು?

ಆದರೆ ಸ್ನೇಹಿತರಿಗೆ, ಆತ್ಮೀಯರಿಗೆ, ಆಪ್ತರಿಗೆ, ನಮ್ಮನ್ನು ತಿಳಿದವರಿಗೆ ಯಾವುದೇ ಹಿಂಜರಿಕೆಯಿಲ್ಲದೆ ಅನಿಸಿದ್ದನ್ನು ಹೇಳಬಹುದು. ಏಕೆಂದರೆ ಅವರು ನಮ್ಮನ್ನು ಅಪಾರ್ಥಮಾಡಿಕೊಳ್ಳುವ ಸಂಭವವೇ ಇಲ್ಲ.

ಇಷ್ಟಾದರೂ ಸತ್ಯ ಎಂದರೆ ಏನು? ನಮಗೆ "ಅನಿಸಿದ್ದೆಲ್ಲಾ" ಸತ್ಯವಿರಲಾರದು ಅಲ್ಲವೇ? ಐದು ಜನ ಕುರುಡರು ಆನೆ ಬಣ್ಣಿಸುವ ಕಥೆ ನೆನಪಿದೆಯಲ್ಲವೇ? ಅವರವರ ನೇರಕ್ಕೆ ಆ ಐದೂ ಜನರು ಸರಿಯೇ!

ಒಬ್ಬ ಜಾಣ ಹೇಳಿದಂತೆ, ನಮ್ಮ ಅನುಭವಗಳಿಗೆ ಬಣ್ಣ ಕಟ್ಟದೆ, ವಿಕಾರಗೊಳಿಸದೇ ಹೇಳಿದರೆ, ಆ ಅನುಭವವೇ ಸತ್ಯ. ಆಧ್ಯಾತ್ಮಿಕವಾಗಿ ಹೇಳುವುದಾದರೆ, ಯಾವುದು ತ್ರಿಕಾಲಕ್ಕೂ ಅನ್ವಯಿಸುತ್ತದೋ (ಭೂತ, ವರ್ತಮಾನ ಮತ್ತು ಭವಿಷ್ಯತ್) ಅದೇ ನಿಜವಾದ ಸತ್ಯ!

ಯೋಚನೆ ಮಾಡಿ! ನಾನೂ ಸ್ವಲ್ಪ, ಸತ್ಯಾನ್ವೇಷಣೆ ಮಾಡಿ ಬರ್ತೀನಿ!
-ಗಿರೀಶ್ ಜಮದಗ್ನಿ

No comments: