Tuesday, 18 November 2008

ಕಾಶಿ ಪುರಾಣ !

ಕಾಶಿ ಯಾತ್ರೆ ಮಾಡೋದು, ನಮ್ಮ, ಅಂದರೆ ಹಿಂದುಗಳ ಜೀವನದಲ್ಲಿ ಒಂದು ಅತ್ಯಂತ ಮಹತ್ವದ ತೀರ್ಥಯಾತ್ರೆ. ಅರೆ, ಏನಿದು, ಈಗ್ಲೇ ಕಾಶಿಯಾತ್ರೆ ಬಗ್ಗೆ ಅಂತ ಗಾಬರಿ (ಅಥವ ಖುಷಿ?) ಆಯ್ತಾ? ಈ ಲೇಖನ, ತೀರ್ಥಯಾತ್ರೆ ಬಗ್ಗೆ ಕಮ್ಮಿ, ಆದರೆ, ಕಾಶಿಯಾತ್ರೆಯಲ್ಲಿ ಏನಾದರೂ "ಬಿಟ್ಟು" ಬರುವುದಕ್ಕೆ ಹೆಚ್ಚು ಸಂಬಂಧಪಟ್ಟಿದ್ದು!

ಕಾಶಿಯಾತ್ರೆ ಮಾಡಿಬಂದೊರನ್ನ, ಕಾಶೀದಾರ ಕಟ್ಟಿಸ್ಕೊತಾನೊ, ಅಥವಾ, ವಿಶ್ವೇಶ್ವರ ದೇವಸ್ಥಾನದ ಕಲ್ಲುಸಕ್ಕರೆ ಪ್ರಸಾದ ತಿಂತಾನೋ, ಕೇಳೋ ಸಾಮಾನ್ಯ ಪ್ರಶ್ನೆ ! "ಅಂದಹಾಗೆ, ಕಾಶೀಲಿ ಏನು ಬಿಟ್ಟು ಬಂದ್ರಿ?" ಅಂತ. ಕಾಶೀಗೆ ಹೋದವರು ಏನಾದರು ಇಷ್ಟವಾದದನ್ನು ಬಿಟ್ಟು ಬರುವುದು ವಾಡಿಕೆ! ನಾ ಹೆಚ್ಚು ಕಮ್ಮಿ ಕೇಳಿದವರೆಲ್ಲಾ ಅವರು ಬಿಟ್ಟು ಬಂದಿದ್ದು ಅವರಿಗಿಷ್ಟವಾದ ತಿಂಡಿಯನ್ನು! ಅದರಲ್ಲೂ ಸಿಹಿ ತಿಂಡಿಯನ್ನು! ಯೋಚನೆ ಮಾಡಿದಾಗ ಈ ಥರ ಇಷ್ಟವಾದ ಸಿಹಿ ತಿಂಡಿ ಬಿಟ್ಟು ಬರೋದು ಎಷ್ಟು ಕಷ್ಟ ಆಗಿರ್‍ಬೇಕಲ್ವ ಅನ್ನಿಸ್ತು. ಜಾಮೂನು, ಜಿಲೇಬಿ, ಮೈಸೂರ್ ಪಾಕ್, ಜಹಂಗೀರ್.... ! ಅಬ್ಬ! ಒಂದೊಂದು ಅದಕ್ಕೇ ಸರಿಸಾಟಿ! ಹಾಗಿದ್ದಾಗ ಹೇಗ್ರೀ ಇನ್ನು ಮುಂದೆ ಇದನ್ನ ತಿನ್ನಲ್ಲ ಅಂತ ಬಿಟ್ಟು ಬರೋದು? ಪಾಪ ಅನ್ಸುತ್ತೆ!

ಇನ್ನೊಂದು ಮೋಜಿನ ಸಂಗತಿಯೆಂದರೆ, ಈ ಕಾಶಿಯಾತ್ರೆ ಮಾಡಿ, ಸಿಹಿ ತಿನ್ನೋದು ಬಿಟ್ಟು ಬಂದವರೆಲ್ಲ, ಅರವತ್ತು ದಾಟಿದವರು. ಅಂದರೆ ಅರಳೊ-ಮರುಳೋ ಅವಸ್ಥೆಯವರು. ಅದು ತಿಳಿದೋ, ತಿಳಿಯದೇನೋ ಅವರ ಸಹಾಯಕ್ಕೆ ಬರುತ್ತೆ. ಹೇಗೆ ಅಂತೀರ? ಒಬ್ಬರು ಕಾಶೀಗೆ ಹೋದಾಗ, ಅವರಿಗಿಷ್ಟವಾದ ಜಿಲೇಬಿ ತಿನ್ನೋದು ಬಿಟ್ಟು ಬಂದಿದ್ರು. ಆದರೆ, ಯಾರ ಮನೇಗಾದ್ರು ಹೋದಾಗ ಅವರಿಗೆ ಜಿಲೇಬಿ ಕೊಟ್ರೆ, "ಸಧ್ಯ, ಜಿಲೇಬಿ ಕೊಟ್ರಲ್ಲ. ನೀವೇನಾದ್ರು ಜಾಮೂನು ಕೊಟ್ಟಿದ್ರೆ, ನಾನು ತಿನ್ನೋಕೆ ಆಗ್ತಿರ್ಲಿಲ್ಲ. ಕಾಶೀಲಿ ಬಿಟ್ಟು ಬಂದನಲ್ಲ ಜಾಮೂನು ತಿನ್ನೋದು?" ಅನ್ನೋರು. ಅದೇ ಪಾರ್ಟಿ, ಇನ್ನೊಬ್ಬರ ಮನೇಲಿ ಜಾಮೂನು ಕೊಟ್ಟಾಗ, ಡಯಲಾಗ್, ಪೂರ್ತಿ ಉಲ್ಟ! ಒಟ್ಟಿನಲ್ಲಿ ಅವರ ಮರೆವು ಅವರ ಸಹಾಯಕ್ಕೆ ಬರ್‍ತಿತ್ತು. ಹಾಗೆ, ಎಲ್ಲ ಸಿಹಿ ತಿಂಡೀನು, ಚೆನ್ನಾಗಿ ತಿಂದು ಮುಗಿಸ್ತಿದ್ರು! ಮನೇಲಿದ್ದಾಗ ಮಾತ್ರ ಪಾಪ, ಆ ಅನುಕೂಲ ಇರಲಿಲ್ಲ. ಯಾಕೆ ಅಂದ್ರೆ, ಏನು ಬಿಟ್ಟು ಬಂದೆ ಅನ್ನೋದು ಇವರು ಮರೀತಿದ್ರೂ, ಅವರ ಹೆಂಡತೀಗೆ ಚೆನ್ನಾಗಿ ಙ್ನಾಪಕ ಇತ್ತಲ್ಲಾ!

ಯಾರೋ ಪುಣ್ಯಾತ್ಮ, ಇಷ್ಟ ಅಂತ ಕಾಶೀಲಿ ಹೆಂಡತೀನೇ ಬಿಟ್ಟು ಬಂದನಂತೆ (ಜೋಕೇ ಇರಬೇಕು)! ಇನ್ನೊಬ್ಬ ಎಷ್ಟು ಯೋಚಿಸಿದ್ರು, ಏನು ಬಿಡೋದು ಅಂತ ಗೊತ್ತಾಗದೆ, ಹೋಗ್ಲಿ ಅಂತ, ಗಡ್ಡಾನೇ ಬಿಟ್ಟನಂತೆ (ಇದು ನಿಜ ಇರಬಹುದು!). ಈ ಬಿಟ್ಟು ಬರುವುದರ ಮೂಲ ಏನಿರಬಹುದು ಅಂತ ಹಾಗೇ ಯೋಚಿಸ್ತಿದ್ದೆ. ಜೀವಮಾನದಲ್ಲಿ ಒಂದು ಸಾರಿ ಹೋಗೋದು ಕಾಶಿಯಾತ್ರೆಗೆ. ಹಾಗೆ ಹೋದ ಙ್ನಾಪಕಾರ್ಥವಾಗಿ ಏನಾದ್ರು ಬಿಟ್ಟು ಬರಲಿ ಅಂತನಾ? ಪ್ರತಿಸಾರಿ ನಮಗಿಷ್ಟವಾದದ್ದು ಕಣ್ಣೆದುರಿಗೆ ಬಂದಾಗ ಕಾಶಿಯಾತ್ರೆಯ (ವಿಶ್ವನಾಥನ) ನೆನಪು ಬರಲಿ ಅಂತಾನಾ? ಅಥವಾ, ಮೂಲತಹ, ನಮ್ಮ ಕೆಟ್ಟಗುಣಗಳನ್ನು (ಸಿಟ್ಟು, ಸುಳ್ಳು ಹೇಳೋದು, ಮೋಸ ಮಾಡೋದು...) ಬಿಟ್ಟು ಬರುವ ಕ್ರಮ ಇದ್ದು ಅದು ಬಿಡೋಕೆ ಆಗದಲೆ, ಇಷ್ಟವಾದದ್ದನ್ನು ಬಿಟ್ಟು ಬರೋ ಪದ್ಧತಿ ಶುರು ಆಯ್ತಾ? ಏನಾದರೂ ಇರಲಿ, ನಮ್ಮ ಪೂರ್ವಜರ ಉದ್ದೇಶ ಒಳ್ಳೆಯದೇ ಇರಬೇಕು. ಅವರೇನು ದಡ್ಡರೆ, ಸುಮ್‌ಸುಮ್ನೆ ಏನಾದ್ರು ಬಿಟ್ಟು ಬರೋದಿಕ್ಕೆ?

ಹಿಂದಿನ ಕಾಲದಲ್ಲಿ, ಕಾಶಿಯಾತ್ರೆಗೆ ಹೋದವರು, ಹೋದ್ರು ಅಂತಲೇ ಲೆಖ್ಖವಿತ್ತಂತೆ! ಅಂದ್ರೆ, ಕಾಶಿಯಿಂದ ವಾಪಸ್ಸು ಮನೆಗೆ ಬರ್‍ತಾ ಇದ್ದವರು ಬಹಳಾ ಕಮ್ಮಿ. ಯಾಕೇ ಅಂದ್ರೆ, ಈಗಿನ ಕಾಲದ ತರಹ, ಬಸ್ಸು, ಕಾರು, ರೈಲು, ವಿಮಾನ ಇರಲಿಲ್ಲವಲ್ಲಾ! ಅವರೆಲ್ಲ, ನಡೆದುಕೊಂಡೋ, ಎತ್ತಿನ ಗಾಡೀಲೋ, ಈಜ್ತಾನೋ, ತೆವಳ್ತಾನೋ, ಹೇಗೋ, ಆರೆಂಟು ತಿಂಗಳಲ್ಲಿ ಕಾಶಿ ಸೇರ್‍ತಿದ್ರಂತೆ (ಹಾಗಂತ ಕೇಳಿದ್ದು!!). ಇನ್ನು ಅಷ್ಟು ಕಷ್ಟ ಪಟ್ಟು ಕಾಡಲ್ಲೋ , ನಾಡಲ್ಲೋ ಹೋಗ್ತಾನೇ, ಏನೇನೋ ಖಾಯಿಲೆಯಾಗಿ ಕಾಶಿ ತಲುಪ್ತಾ ಇದ್ದದ್ದೇ ಕಮ್ಮಿ ಜನ ಅಂತ ನಮ್ಮಜ್ಜಿ ಹೇಳ್ತಾ ಇದ್ರು. ಕಾಶಿ ತಲುಪಿದ ಮೇಲೆ, ಕೆಲವರು, ವಾಪಸ್ಸು ಬರೋ ಶಕ್ತಿ ಇಲ್ಲದೇ, ಅಲ್ಲೇ ಎಲ್ಲೋ ಅಲೆಮಾರಿಗಳ ತರಹ ಇದ್ದುಬಿಡುತ್ತಿದ್ದರಂತೆ! (ಮದುವೆ ಕಲಾಪದಲ್ಲೂ, ವರ, ಕಾಶೀಗೆ ಹೋಗ್ತೀನಿ ಅಂತ ಭಾವೀ ಮಾವನಿಗೆ ಹೆದರಿಸೋದು ಇದಕ್ಕೆ ಇರಬೇಕು ಅಲ್ವ?) ಹಿಂದೆ, ಅಕಸ್ಮಾತ್ ಏನಾದ್ರೂ ಕಾಶಿಗೆ ಹೋದವರು, ಅಪ್ಪಿ ತಪ್ಪಿ, ವಾಪಸ್ಸು ಬಂದ್ರು ಅಂದ್ರೆ, ಊರೆಲ್ಲಾ ಸೇರಿ, ಸಂಭ್ರಮದಿಂದ ಹಬ್ಬ ಮಾಡ್ತಿದ್ದರಂತೆ! ಕಾಶಿಗೆ ಹೋಗೋಕ್ಕೆ ಆಗದೇ ಇದ್ದವರು, ಹೋಗಿ ಬಂದವರನ್ನು ನೋಡಿದ್ರೆ ಸಾಕು, ಹೋಗಿ ಬಂದಷ್ಟೆ ಪುಣ್ಯ ಸಿಗ್ತಾಯಿತ್ತಂತೆ!

ಈಗ ಬಿಡಿ, ಕಾಶಿಗೆ ಹೋಗಿ ಬರೋದು, ತುಂಬಾ ಸುಲಭ. ಪ್ಯಾಕೇಜ್ ಟೂರ್ ಬೂಕ್ ಮಾಡಿದ್ರೆ ಆಯ್ತು. ಬರೀ ಕಾಶಿ ಅಲ್ಲ, ಮುಂಬೈ‌ಯಿಂದ ಹಿಡಿದು, ಜೈಪುರ್, ದೆಹಲಿ, ಕಾಶಿ, ಬದರಿ, ಕೇದರ ಎಲ್ಲ ಸುತ್ತಿಸಿ, ಕೊನೆಗೆ, ಮುಮ್ತಾಜ಼್ ಮಹಲ್ (ಅದೇ ರೀ, ತಾಜ್ ಮಹಲ್) ಒಳಗೂ ಕರ್ಕೊಂಡು ಹೋಗಿ, ಮುಮ್ತಾಜ಼್‌ನ ಗೋರಿ ಕೂಡ ತೋರಿಸಿ ಕರ್‍ಕೊಂಡು ಬರ್‍ತಾರೆ! ನೋಡಿ ಎಂತಹ ಪುಣ್ಯ! ಕಾಶೀ ಹೆಸರಲ್ಲಿ, ಪೂರ್ತಿ ಉತ್ತರ ಭಾರತ ನೋಡ್ಕೊಂಡು ಬರಬಹುದು.

ಅರೆ! ಏನಿದು? ಹೊರಟೇ ಬಿಟ್ರಾ ಕಾಶಿಗೆ? ಹೊರಡಕ್ಕೆ ಮೊದಲು, ಕಾಶಿ ಬಗ್ಗೆ, ನಮ್ಮ ಕೈಲಾಸಂ ಬರೆದಿರೊ, ಒಂದು ತಮಾಷೆ ಹಾಡು ಕೇಳ್ಬಿಡಿ...
http://www.youtube.com/watch?v=Jzlf4c27Lss
-ಗಿರೀಶ್ ಜಮದಗ್ನಿ

No comments: