Monday 29 December 2008

ಮುಖ ಬೆಲೆ !

ಇತ್ತೀಚೆಗೆ ಚೀನದಲ್ಲಿ ನಡೆದ ಒಲಂಪಿಕ್ಸ್ ಕೂಟ ಒಂದು ಅದ್ಭುತ ಯಶಸ್ಸು ಎಂದು ಜಗತ್ತೇ ಕೊಂಡಾಡಿತು. ಮೊದಲ ಬಾರಿಗೆ ಒಲಂಪಿಕ್ಸ್ ಕ್ರೀಡಾಕೂಟದ ಆತಿಥ್ಯ ವಹಿಸಿದ್ದ ಚೀನ ದೇಶ, ಪ್ರಪಂಚವನ್ನು ತನ್ನತ್ತ ಸೆಳೆಯುವಲ್ಲಿ, ಹಾಗು, ಅದರ ಯಶಸ್ಸಿಗೆ ಎಲ್ಲ ಎಚ್ಚರಿಕೆ ವಹಿಸಿ, ಸಣ್ಣ ಸಣ್ಣ ವಿಷಯಕ್ಕೂ ಬಹಳ ಗಮನ ನೀಡಿತ್ತು. ಮೊದಲ ದಿನದ ಕಾರ್ಯಕ್ರಮದಲ್ಲಿ, ಚೀನಿ ರಾಷ್ಟ್ರಗೀತೆ ಹಾಡಿದ ಪುಟ್ಟ ಸುಂದರ ಹುಡುಗಿ ಲಿನ್ ಮಾವೊಯೀಕೆ, ಕ್ಷಣದಲ್ಲಿ ಜಗತ್‌ಪ್ರಸಿದ್ಧಿಯಾದಳು. ಅವಳ ಕಂಠಕ್ಕೆ, ಆ ಸುಂದರ ಮುಖಕ್ಕೆ ಜಗತ್ತೇ ಬೆರಗಾಗಿತ್ತು. ಆದರೆ, ನಂತರ ತಿಳಿದದ್ದು, ಆ ಹಾಡು ಮೊದಲೇ ಧ್ವನಿಮುದ್ರಿತವಾಗಿದ್ದು, ಲಿನ್ ಅದಕ್ಕೆ ಬರಿ ತುಟಿ ಚಾಲನೆ ಮಾಡಿದ್ದು ಅಂತ. ಮೂಲತಹ ಆ ಹಾಡನ್ನು ಹಾಡಿದ್ದು ಏಳು ವರುಷದ ಹುಡುಗಿ, ಯಾಂಗ್ ಪೀಯೀ. ಅವಳ ಹಲ್ಲು ವಕ್ರವಾಗಿದ್ದು, ಮುಖ ಲಿನ್ ಅಷ್ಟು ಸುಂದರವಾಗಿಲ್ಲದ ಕಾರಣ, ಯಾಂಗ್‌ಗೆ ಕಾರ್ಯಕ್ರಮದಲ್ಲಿ ಹಾಡಲು ಅವಕಾಶನೀಡಲಿಲ್ಲ! ಸುಶ್ರಾವ್ಯ ಕಂಠವಿದ್ದರೂ, ಮುಖಬೆಲೆ ಇರದಿದ್ದೇ ಇದಕ್ಕೆ ಕಾರಣ! ಎಂತಹ ವಿಪರ್ಯಾಸ!

ನಮ್ಮ ದೈನಂದಿನ ಆಗುಹೋಗುಗಳಲ್ಲೂ ಅಷ್ಟೆ. ಮುಖ ನೋಡಿ ಮಣೆ ಹಾಕುವ ಕೆಟ್ಟ ಚಾಳಿ. ಮುಖಕ್ಕೆ ಮೊದಲ ಪ್ರಾಧಾನ್ಯತೆ. ಒಬ್ಬ ವ್ಯಕ್ತಿಯನ್ನು ಪೂರ್ಣವಾಗಿ ತಿಳಿಯದೇ, ಅವರ ಗುಣವನ್ನು ಲೆಕ್ಕಿಸದೇ, ಬರಿ ಅವರ ಚಹರೆ ನೋಡಿ, ಅವರ ಬಗ್ಗೆ ತೀರ್ಮಾನ ಮಾಡಿಬಿಡುತ್ತೇವೆ. ಮುಖ ಚೆನ್ನಗಿದ್ದಾಕ್ಷಣ, ಅವರ ಗುಣ, ನಡತೆ, ಎಲ್ಲ ಚೆನ್ನಾಗಿರಬೇಕೆಂದೇನು ಇಲ್ಲವಲ್ಲ! ಹಾಗೇ, ಕಪ್ಪಗಿದ್ದವರು, ಬಾಹ್ಯದಿಂದ ಕುರೂಪಿಯಾಗಿದ್ದವರೂ, ಆಂತರ್ಯದಲ್ಲಿ, ಒಳ್ಳೆಯವರಲ್ಲ ಎನ್ನುವುದು ತಪ್ಪು. ಪುಸ್ತಕವನ್ನು ಓದದೇ ಬರಿ ಅದರ ಮುಖಪುಟ ಅಥವ ವಿನ್ಯಾಸ ನೋಡಿ, ಪುಸ್ತಕ ಚೆನ್ನಾಗಿದೆ / ಚೆನ್ನಾಗಿಲ್ಲ ಎಂದು ತೀರ್ಮಾನ ತಳೆಯುವುದು ಮುಟ್ಠಾಳತನ ಅಲ್ಲದೆ ಬೇರೇನು ಅಲ್ಲ.

ಆದರೆ, ಈ ತಪ್ಪು ಶಿಕ್ಷಣ ನಮ್ಮ ವ್ಯವಸ್ಥೆಯಲ್ಲೇ ನಡೆಯುತ್ತದೆ. ಉದಾಹರಣೆಗೆ, ನಮ್ಮ ಚಲನಚಿತ್ರದಲ್ಲೇ ನೋಡಿ. ವಿಲನ್‌ನನ್ನು, ಅತ್ಯಂತ ಕುರೂಪಿಯಾಗಿ ತೋರಿಸುತ್ತಾರೆ! ಸ್ಪುರದ್ರೂಪಿ ವಿಲನ್‌ನನ್ನು ನಾನು ನಮ್ಮ ಸಿನೇಮಗಳಲ್ಲಿ ನೋಡಿರುವುದು ಬಹಳ ವಿರಳ. ಇದರಿಂದ, ಕುರೂಪಿಯಾದವರೆಲ್ಲ, ಕೆಟ್ಟವರು, ವಿಕೃತಕಾಮನೆಗಳನ್ನು ಹೊಂದಿರುವವರು ಎಂಬ ತಪ್ಪು ಅಭಿಪ್ರಾಯ ಮೂಡುವ ಸಾಧ್ಯತೆಗಳಿವೆ. ಬಾಹ್ಯ ಸೌಂದರ್ಯಕ್ಕೆ ನಾವು ಬಹಳ ಪ್ರಾಮುಖ್ಯತೆ ನೀಡುತ್ತೇವೆ. ೯೦ ಪ್ರತಿಶತ ಜಾಹಿರಾತುಗಳು ನಮ್ಮ ಮುಖಾಲಂಕಾರಕ್ಕೆ ಸಂಬಂಧಿಸಿದ್ದವು. ಕಪ್ಪಗಿರುವರನ್ನು ಕೇವಲ ಹದಿನೈದು ದಿನದಲ್ಲಿ ಬೆಳ್ಳಗೆ ಮಾಡಿಬಿಡುವ ಹೊಸ ಹೊಸ ಸೌಂದರ್ಯವರ್ಧಕಗಳು ಮಾರುಕಟ್ಟೆಯಲ್ಲಿ ಪ್ರತಿದಿನವೂ ಅವತಾರ ತಳೆಯುತ್ತವೆ. ಇದರಿಂದ, ಸಮಾಜದಲ್ಲಿ ಕಪ್ಪಗಿರುವುದೇ ತಪ್ಪು ಎಂಬ ತಪ್ಪು ಕಲ್ಪನೆಯೂ ಮೂಡುತ್ತದೆ. ಇಂತಹ ಜಾಹಿರಾತುಗಳು, ಎಷ್ಟೊ ಕೃಷ್ಣವರ್ಣದ ಹೆಂಗಳೆಯರ ಆತ್ಮವಿಶ್ವಾಸವನ್ನೂ ಕುಂದಿಸುತ್ತದೆ.

ಡಿ.ವಿ.ಜಿ ಅವರು, ಮಂಕುತಿಮ್ಮನ ಕಗ್ಗದಲ್ಲಿ, ಬಾಹ್ಯ ಸೌಂದರ್ಯಕ್ಕೆ ನಾವು ಕೊಡುವ ಮಹತ್ವವನ್ನು ಹೀಗೆ ಲೇವಡಿ ಮಾಡಿದ್ದಾರೆ.
ಸೊಗಸು ಬೇಡದ ನರಪ್ರಾಣಿಯೆಲ್ಲಿಹುದಯ್ಯ?
ಮಗುವೆ ಮುದುಕನೆ ಪುರಾಣಿಕ ಪುರೋಹಿತರೆ?
ಜಗದ ಕಣ್ಣಿಣಿಕದೆಡೆ ಮುಕುರದೆದುರೊಳು ನಿಂತು
ಮೊಗವ ತಿದ್ದುವರೆಲ್ಲ - ಮಂಕುತಿಮ್ಮ
(ಮುಕುರ = ಕನ್ನಡಿ, ಜಗದ ಕಣ್ಣಿಣಿಕದೆಡೆ = ಜಗವು ನೋಡದಿರುವಾಗ)

ಈ ಧೋರಣೆ ಬದಲಾಗಬೇಕು. ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಯುವ ಪ್ರಯತ್ನ ಹೆಚ್ಚಾಗಬೇಕು. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಪರಿಪಕ್ವತೆಯನ್ನು ಪಡೆಯಬೇಕು. ಇದು ಹೇಳುವುದು/ ಬರೆಯುವುದು ಸುಲಭ ಆದರೆ ಆಚಾರ ಕಠಿಣ. ಆದರೆ, ಸ್ವಲ್ಪ ಪ್ರಯತ್ನದಿಂದ ಖಂಡಿತ ಸಾಧ್ಯ. ಏಕೆಂದರೆ, ಎಲ್ಲರನ್ನೂ ಹೊರಗಿನಿಂದಲ್ಲದಿದ್ದರೂ ಒಳಗಿನಿಂದ ಸುಂದರವಾಗೇ ಸೃಷ್ಟಿಮಾಡಿದ್ದಾನೇ ಆ ಭಗವಂತ! ನಮ್ಮ ಮತ್ತು ಬೇರೊಬ್ಬರ ಅಂತರಂಗದ ಸುಂದರತೆಯನ್ನು ಕಾಣುವುದು ಸಾಧ್ಯವಾದರೆ, ನಮ್ಮ ಜೀವನ ಖಂಡಿತ ಸಾರ್ಥಕ!

-ಗಿರೀಶ್ ಜಮದಗ್ನಿ

No comments: