Friday, 6 February 2009

ನಾಮಾಯಣ !

ಪುರಂದರ ದಾಸರ "ನೀನ್ಯಾಕೊ ನಿನ್ನ ಹಂಗ್ಯಾಕೊ, ನಿನ್ನ ನಾಮದ ಬಲವೊಂದಿದ್ದರೆ ಸಾಕೋ" ಕೇಳುವಾಗ, ಇದು ಯಾವ ನಾಮದ ಬಲ ಎಂಬ ಅನುಮಾನವಾದರೂ, ಹಾಡಿನ ಅನುಪಲ್ಲವಿ ಮತ್ತು ಚರಣ ಕೇಳಿದಾಗ, ಇದು "ಹೆಸರಿನ" ನಾಮ, "ಹಣೆಯ" ನಾಮವಲ್ಲ ಎಂದು ಖಚಿತವಾಗುತ್ತದೆ. ಆದರೆ, ನಾನು ಬರೆಯ ಹೊರಟಿರುವುದು ಹಣೆಯ ನಾಮದ ಬಗ್ಗೆ!

ದೇವನೊಬ್ಬ, ಆದರೆ, ನಾಮ ಹಲವು! ನೀವು ನೋಡಿರುವಂತೆ ನಾಮಗಳಲ್ಲಿ, ಹಲವು ಆಕಾರ, ಅಳತೆ, ಡಿಸೈನ್. ಕೆಲವು ಎಡದಿಂದ ಬಲ, ಕೆಲವು ಕೆಳಗಿಂದ ಮೇಲೆ. ಇನ್ನು ಕೆಲವು ದುಂಡಗೆ ಹಣೆಯ ಅಂಚಿನಲ್ಲಿ! ಹಣೆಯ ಅಗಲ ಹೆಚ್ಚಿದ್ದಷ್ಟೂ ನಾಮದ ಅಂದ ಹೆಚ್ಚು! ಹಿಂದೆ ನಾಮವಿಲ್ಲದೆ ಮನೆಯಿಂದ ಹೊರಗಡೆ ಕಾಲಿಡುತ್ತಿರಲಿಲ್ಲ, ಗಂಡಸರು. ಈಗ ಎಲ್ಲ ಬದಲಾಗಿದೆ. ಮನೆಯಿಂದ ಹೊರಗೆ ಹೋಗುವ ಮೊದಲು, ಹಣೆಯ ಮೇಲಿನ ನಾಮ ಸರಿಯಾಗಿ ಅಳಿಸಿಯಾಗಿದೆ ಎಂದು ಖಾತ್ರಿ ಮಾಡಿಕೊಂಡೇ ಮನೆ ಬಿಡುತ್ತಾರೆ. ಇಲ್ಲದಿದ್ದರೆ, ಕುಹಕಿಗಳ ಅವಹೇಳನಕ್ಕೆ, ಲೇವಡಿಗೆ, ಗುರಿಯಾಗಬೇಕಾಗುತ್ತದೆ!

ನಾಮದ ಬಳಕೆ ಸಾವಿರಾರು ವರುಷ ಹಳೆಯದು. ಹಿಂದು ಧರ್ಮದಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಅದೇನೆಂದರೆ, ನಮ್ಮ ಆಚಾರ ವಿಚಾರಗಳಲ್ಲಿ ಸಾಂಕೇತಿಕ ಅರ್ಥಗಳಿಗೆ ಬಹಳ ಪ್ರಾಮುಖ್ಯತೆ. ಈ ಸಾಂಕೇತಿಕ ಅರ್ಥಗಳನ್ನು ತಿಳಿಯುವ ಗೋಜಿಗೇ ಹೋಗದೆ, ಅದನ್ನು ತಿರಸ್ಕರಿಸುವ ಅಙ್ನಾನಿಗಳಿದ್ದಾರೆ. ಎಲ್ಲದಕ್ಕೂ ಅರ್ಥವಿರುವಂತೆ, ನಾಮಕ್ಕೂ ಅರ್ಥವಿದೆ.
ನಾಮದ ಬಳಕೆ ಯಾಕೆ? ಇದಕ್ಕೆ ಉತ್ತರ ಮೂರು ಕೋನದಿಂದ ಹುಡುಕಬಹುದು.

ಅಲಂಕಾರದ ದೃಷ್ಟಿಕೋನದಿಂದ ನೋಡಿದರೆ, ಹಣೆಯ ಜಾಗ ಮುಖದಲ್ಲೇ ಬಹಳ ಪ್ರಮುಖ! ಬಿಳಿ, ಕೆಂಪು , ಹಳದಿ ಇತ್ಯಾದಿ ಬಣ್ಣದಿಂದ ಇಡುವ ನಾಮ, ಮುಖದ ಲಕ್ಷಣವನ್ನು ಹೆಚ್ಚಿಸುತ್ತದೆ (ಯಾವುದೆ ಬಣ್ಣದ ಚರ್ಮವಿದ್ದರೂ!). ನಾಮ ಮುಖಬೆಲೆಯನ್ನು ವೃಧ್ಧಿಸುತ್ತದೆ ಕೂಡ. ಹಣೆಗೆ ಇಡುವ ನಾಮ, ನಮ್ಮ ಧಾರ್ಮಿಕ ನಂಬಿಕೆ (ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಇತ್ಯಾದಿ)ಗಳನ್ನು ಹೆಚ್ಚು ಪ್ರಯಾಸವಿಲ್ಲದೆ ಪ್ರಕಟಿಸಲು ಉಪಕಾರಿ ಸಹ! ಪ್ರತಿಯೊಂದು ಕಂಪನಿಗೂ ತನ್ನದೇ ಆದ ವಿಶಿಷ್ಟ ಚಿನ್ಹೆ (Logo) ಇರುವಂತೆ! ಹಿಂದುಗಳಲ್ಲದೇ, ಇನ್ನೂ ಕೆಲವು ಜಾತಿ-ಪಂಗಡಗಳಲ್ಲಿ ಮತ್ತು ಬುಡಕಟ್ಟು ಜನಾಂಗಗಳಲ್ಲೂ ನಾಮದ ಸಂಪ್ರದಾಯ ಇನ್ನೂ ಕಾಣಸಿಗುತ್ತದೆ.

ಸಾಂಕೇತಿಕವಾಗಿ ನೋಡಿದರೆ, ಎಡದಿಂದ ಬಲಕ್ಕೆ ಸ್ಮಾರ್ಥರು ಇಡುವ ಮೂರು ವಿಭೂತಿ ಪಟ್ಟೆ, ಅಹಂ, ಅಙ್ನಾನ, ಮತ್ತು ಕರ್ಮದ ಪ್ರತೀಕ. ಅದನ್ನು ವಿಭೂತಿ(ಬೂದಿ)ಯಂತೆ ಸುಟ್ಟು ನಾಶಮಾಡಿ, ಈ ಹುಟ್ಟು-ಸಾವಿನ ಚಕ್ರದಿಂದ ಮುಕ್ತಿಪಡೆಯುವುದೇ ಜೀವನದ ಧ್ಯೇಯ. ಶ್ರೀ ವೈಶ್ಣವರು ಇಡುವ, U ಅಥವ V ನಾಮ ಬ್ರಹ್ಮ, ವಿಷ್ಣು ಮತ್ತು ಲಕ್ಷ್ಮಿಯ ಸಂಕೇತ. ಸದಾ ಅವರ ರಕ್ಷಣೆ ನಮಗಿರಲಿ ಎಂದು, ದೇಹದ ಪ್ರಮುಖ ಭಾಗವಾದ ಹಣೆಯ ಮೇಲೆ ಉದ್ದ ನಾಮ ಧರಿಸುವ ಪ್ರತೀತಿ. ಮಾಧ್ವರು ಇಡುವ ಶಂಖ ಮತ್ತು ಚಕ್ರದ ಮುದ್ರೆ, ಭಗವಂತನ ಆಯುಧದಿಂದ ನಮಗೆ ರಕ್ಷಣೆ (ಚಕ್ರ) ಮತ್ತು ಸದಾ ವಿಜಯ (ಶಂಖ)ದೊರಕಲೆಂಬ ಸಂಕೇತ.

ಎಲ್ಲಕಿಂತ ಮಹತ್ವವಾದದ್ದು ವೈದ್ಯಕೀಯ ದೃಷ್ಟಿಕೋನ! ವಿಭೂತಿ, ಗಂಧ, ಕುಂಕುಮ, ಚಂದನ ಮತ್ತು ಅರಿಶಿನ ಮುಂತದ ಜೈವಿಕ ಪದಾರ್ಥ ಬಳಸುವ ನಾಮ, ಶಿರ ಮತ್ತು ಕಣ್ಣುಗಳಿಗೆ ತಂಪೊದಗಿಸುತ್ತದೆ ಎನ್ನುವ ವಿಷಯ ಬಹಳ ಹಳೆಯದು. ಹಾಗೆ, ಎರಡು ಹುಬ್ಬು ಕೂಡುವ ಬಿಂದು, ಕುಂಡಲಿನಿ ವಿದ್ಯೆಯಲ್ಲಿ ಬಹಳ ಪ್ರಮುಖ ಚಕ್ರದ ಸ್ಥಾನ. ಈ ಚಕ್ರವನ್ನು ಜಾಗೃತಗೊಳಿಸುವ ಸಾಧನೆ ಮಾಡಿದವರು ತಮ್ಮ ದೇಹದ ಪ್ರತಿಕಾರ್ಯವನ್ನು ಹತೋಟಿಯಲ್ಲಿಡಬಲ್ಲರು. ಅದಕ್ಕೇ, ಎರಡು ಹುಬ್ಬುಗಳ ನಡುವಿನ ಜಾಗ ಮತ್ತು ಅದನ್ನು ಸುತ್ತುವರಿದ ಹಣೆಯನ್ನು ರಕ್ಷಿಸುವುದು ನಮ್ಮ ಪೂರ್ವಜರ ವಿಚಾರ. ಕುಂಕುಮವನ್ನು ಹಣೆಯ ಮಧ್ಯೆ ಇಡುವುದೂ ಇದೇ ಕಾರಣಕ್ಕೆ.

ಇಷ್ಟೊಂದು ಹಿನ್ನಲೆ ಮತ್ತು ಉಪಯೋಗವಿರುವ ನಾಮ, ಈಗಿನ ಜೀನ್ಸ್ ಮತ್ತು ಬರ್ಮುಡಾ ಫ್ಯಾಷನ್ ಜೊತೆ ಯಾಕೋ ಸರಿಹೊಂದುವುದಿಲ್ಲ! ಆದರೆ ಹಿಂದಿನವರಿಗಿಂತ, ನಾಮದ ವೈದ್ಯಕೀಯ ಉಪಯೋಗಗಳ ಲಾಭ ಪಡೆಯುವುದು ನಮಗೆ ಮುಖ್ಯ ಅನಿಸುತ್ತದೆ. ಏಕೆಂದರೆ, ದಿನಕ್ಕೆ ಸರಾಸರಿ ಎಂಟು ಗಂಟೆ ಕಂಪ್ಯೂಟರಿನ ಮಾನೀಟರನ್ನೇ ದಿಟ್ಟಿಸಿ ನೋಡುವ ನಮ್ಮ ಕಣ್ಣುಗಳಿಗೆ ಮತ್ತು ತಲೆಗೆ, ನಾಮದ ಬಳಕೆ ಹೆಚ್ಚು ಫಲಕಾರಿಯಾಗಬಹುದು!

ನಾಮ ಹಾಕುವ (ಬೇರೆಯವರಿಗಲ್ಲ, ನಮ್ಮ ಹಣೆ ಮೇಲೆ!) ಅಭ್ಯಾಸ ದಿನೇ ದಿನೇ ನಶಿಸಿಹೋಗುತ್ತಿದ್ದರೂ, ಅದರ ಮಹತ್ವವನ್ನರಿತು, ಪಾಶ್ಚತ್ಯರು ಅದನ್ನು ನಕಲು ಮಾಡಿ (ಯೋಗ, ಧ್ಯಾನ, ಆಯುರ್ವೇದದಂತೆ!) ಮುಂದೆ ಎಂದೋ ಮತ್ತೆ ನಮ್ಮ ಯುವಕರು ಅದನ್ನು ಹೊಸ ವಿಷಯವೆಂಬಂತೆ ಅವರಿಂದ ಕಲಿಯಬಹುದು!

"ನಾಮ"ಸ್ಕಾರ!
-ಗಿರೀಶ್
ಜಮದಗ್ನಿ

No comments: