Tuesday 6 January 2009

ಸುಖವೆಂಬ ಮರೀಚಿಕೆ....

ಕಳೆದ ಒಂದು ವಾರದಿಂದ ಎದುರಿಗೆ ಸಿಕ್ಕಿದವರೆಲ್ಲರಿಗೂ "ಹ್ಯಾಪಿ ನ್ಯೂ ಯಿಅರ್" ಹೇಳುತ್ತಲೇ ಇದ್ದೇನೆ. ಅಂಚೆ, ದೂರವಾಣಿ, ಎಸ್ಸೆಮ್ಮೆಸ್ಸ್, ಇ-ಪತ್ರ, ಹೀಗೆ ಎಲ್ಲಾ ಮಾಧ್ಯಮದಿಂದಲೂ ಹೇಳಿದ್ದೂ ಆಗಿದೆ (ಇದು ಸ್ವಲ್ಪ ಅತಿಯಾಗಿದೆ ಕೂಡ)! ಈಗಂತೂ ಇದು ಒಂದು ಯಾಂತ್ರಿಕ ಕ್ರಿಯೆಯಾಗಿ ರೋಸಿಹೋಗಿದೆ! ಶುಭಾಷಯ ಹೇಳುವ ಸದುದ್ದೇಶ ಹಾಗು ಮೂಲ ಅರ್ಥವೂ ಕಳೆದು ಹೋಗಿವೆಯೇನೋ ಅನಿಸುತ್ತದೆ. ಎಷ್ಟು ಜನ ಶುಭಾಷಯ ಹೇಳುವಾಗ ನಿಜವಾಗಲೂ ಇನ್ನೊಬ್ಬರು ಸುಖವಾಗಿರಲಿ, ಅವರಿಗೆ ಸಂತೋಷಸಿಗಲಿ ಎಂದು, ಮನಃಪೂರ್ತಿಯಾಗಿ ಹಾರೈಸುತ್ತಾರೋ ಗೊತ್ತಿಲ್ಲ. ಇದ್ದರೂ, ಅವರ ಸಂಖ್ಯೆ ಹೆಚ್ಚೇನೂ ಇರಲಾರದು! ಆದರೆ, ಎಲ್ಲರೂ ಸುಖ, ನೆಮ್ಮದಿ, ಆರೋಗ್ಯದಿಂದಿರಲಿ ಎಂದು (ಮನಃಪೂರ್ವಕವಾಗಿ) ಆಶಿಸುವುದರಲ್ಲಿ ತಪ್ಪೇನಿಲ್ಲ ಅಲ್ಲವೆ? ಅದು ನಮ್ಮ ಸಂಸ್ಕೃತಿಯೂ ಕೂಡ!

ಈ "ಹ್ಯಾಪಿನೆಸ್ಸ್", ಅಂದರೆ, ಸುಖದ ಬಗ್ಗೇನೆ ಯೋಚಿಸುತ್ತಿದ್ದೆ. "ಸುಖ" ಅಂದರೆ ಏನು? ಮನುಷ್ಯ ಯಾವಾಗ, ಯಾಕೆ ಸುಖವಾಗಿರುತ್ತಾನೆ? ಸುಖವಾಗಿರಲು ಏನಾದರೂ ಸೂತ್ರಗಳಿವೆಯೆ, ಅಡ್ಡದಾರಿಗಳಿವೆಯೆ? ನಿಘಂಟಿನ ಪ್ರಕಾರ, ಇಂಗ್ಲಿಷ್‌ನ "ಹ್ಯಾಪಿ" ಅಥವ "ಹ್ಯಾಪಿನೆಸ್ಸ್‌"ಗೆ ಹಲವು ಅರ್ಥಗಳು - ಸುಖ, ಸಂತೋಷ, ನಲಿವು, ಸೌಖ್ಯ, ಸಂತ್ರುಪ್ತಿ....ಹೀಗೆ. ಒಬ್ಬ ತತ್ವಙ್ನಾನಿಯ ಪ್ರಕಾರ, ಸುಖ ಎಂಬುದು, ಮನಸ್ಸಿನ ಸ್ಥಿತಿ ಅಷ್ಟೆ. ಯೋಚನೆ ಮಾಡಿದಾಗ ಸರಿ ಎನಿಸುತ್ತದೆ! ಎಲ್ಲರಿಗೂ ಒಂದೇ ವಸ್ತುವಿನಿಂದ ಅಥವಾ ವಿಷಯದಿಂದ ಸುಖ ಸಿಗುವ ಸಾಧ್ಯತೆ ಇಲ್ಲ ಅಲ್ಲವೆ? ಒಬ್ಬರಿಗೆ ಮಳೆಯಲ್ಲಿ ನೆನೆದರೆ ಸುಖ ಸಿಗುವುದಾದರೆ, ಕೆಲವರಿಗೆ ಬೀಳುವ ಆ ಹನಿಗಳನ್ನು ಕಿಟಕಿಯ ಹಿಂದಿನಿಂದಲೇ ನೋಡಿ ಸುಖ ಅಥವ ಸಂತೋಷ ಸಿಗಬಹುದು. ಹಾಗೇ, ಒಂದೇ ವಸ್ತು ಅಥವ ವಿಷಯ ಎಲ್ಲ ಕಾಲದಲ್ಲೂ ಅದೇ ವ್ಯಕ್ತಿಗೆ ಸುಖ ಕೊಡುತ್ತದೆಂಬ ಖಾತ್ರಿಯೂ ಇಲ್ಲ! ಬೇಸಿಗೆಯ ಬಿಸಿಲಿನಲ್ಲಿ, ಮುದ ಹಾಗು ಹಿತ ನೀಡುವ ತಣ್ಣನೆ ಗಾಳಿ, ಡಿಸೆಂಬರ್‌ನ ಚಳಿಗಾಲದಲ್ಲಿ ಕಠೋರ! ಮುಂಜಾನೆ ಎದ್ದಾಗ ಸುಬ್ಬುಲಕ್ಶ್ಮಿ ಹಾಡಿದ ವೆಂಕಟೇಶ ಸುಪ್ರಭಾತ ಮನಸ್ಸಿಗೆ ಉಲ್ಲಾಸ ತಂದು, ಕಚೇರಿಗೆ ಹೋಗುತ್ತ ಮಾರ್ಗದಲ್ಲಿ ಮಡೋನಾ‌ಳ ಸಂಗೀತ ಸುಖ ನೀಡಿ, ಸಂಜೆಯ ಚಹ ಜೊತೆ, ಭೀಮಸೇನ್ ಜೋಷಿಯವರ ಶುಧ್ಧಕಲ್ಯಾಣ್ ರಾಗದ ಚೀಜ್ ಆನಂದ ನೀಡಬಹುದು! ಅಂದರೆ, ಸುಖದ ಮೂಲ ಮಳೆ, ತಣ್ಣನೆ ಗಾಳಿ ಅಥವ ಸಂಗೀತವಲ್ಲ, ಅದನ್ನು ಸ್ವೀಕರಿಸುವ ಸ್ಥಿತಿಯಲ್ಲಿದ್ದ ಮನಸ್ಸು ಮಾತ್ರವಲ್ಲವೇ?

ಸುಖವಾಗಿರಲು ಮೂಲ ಕಾರಣ ಮನಸ್ಸೇ ಅಂತಾದರೆ, ಮನಸ್ಸನ್ನು ಕಷ್ಟವೋ ನಷ್ಟವೋ, ಎಲ್ಲಾ ಹೇಗೆ ಬರುತ್ತದೋ ಹಾಗೆ, ಬಂದದ್ದೆಲ್ಲ ಬರಲಿ ಎಂದು ಆಹ್ವಾನ ನೀಡುವ ಧೋರಣೆಗೆ ಪಳಗಿಸಿ, ಸಿದ್ಧಪಡಿಸಿದರೆ ಆಯಿತು, ಸುಖವನ್ನು ಹೊಂದುವ ದಾರಿ ಸುಗಮ! ಹೀಗೆ ವೇದಾಂತ ಬರೆಯುವುದು ಸುಲಭ, ಆದರೆ, ಮನಸ್ಸನ್ನು ನಾವು ಹೇಳಿದ ಹಾಗೆ ಕೇಳುವಂತೆ ಮಾಡುವುದು ಸಾಧಾರಣ ವಿಷಯವಲ್ಲ. ಏಕೆಂದರೆ, ಈ ಮನಸ್ಸೆಂಬ ಮರ್ಕಟದ ಬಿಗಿಮುಷ್ಠಿಗೆ ಸಿಲುಕಿ, ಅದು ಹೇಳಿದಂತೆ ಸದಾಕಾಲ ನಾವು ಕುಣಿಯುತ್ತೇವೆ! ಭಗವದ್ಗೀತೆಯಲ್ಲಿನ ನುಡಿಯಂತೆ, The mind acts like an enemy for those who do not control it! ಮನಸ್ಸನ್ನು ಹತೋಟಿಯಲ್ಲಿಟ್ಟವರಿಗೆ, ಸುಖವೂ ಸುಖ ನೀಡುತ್ತದೆ, ಕಷ್ಟವೂ ಸುಖ ನೀಡುತ್ತದೆ! ಎಲ್ಲಿಯತನಕ ನಾವು ನಮ್ಮ ಮನಸ್ಸಿನ ಅಧೀನದಲ್ಲಿರುತ್ತೇವೋ, ಅಲ್ಲಿಯವರೆಗೂ ಮುಂಗಾರಿನ ಮಳೆಯೂ ಅಸಹ್ಯವೆನಿಸುತ್ತದೆ, ತಣ್ಣನೆಯ ಗಾಳಿಯೂ ಕಠೋರವೆನಿಸುತ್ತದೆ, ಇಂಪಾದ ಸಂಗೀತವೂ ಕರ್ಕಶವೆನಿಸುತ್ತದೆ, ಸುಖವೆಂಬುದು ಮರೀಚಿಕೆಯಾಗಿಯೇ ಉಳಿಯುತ್ತದೆ!

ನೀವೇನಂತೀರ?
ಗಿರೀಶ್ ಜಮದಗ್ನಿ

2 comments:

ಮನಸು said...

ಮೊದಲ ಬೇಟಿಗೆ ನಿಮ್ಮ ಅಂಕಣ, ಚಿತ್ರಣ ಎಲ್ಲವೂ ಸೂರೆಗೊಂಡಿದೆ......

ಮನಸ್ಸೇ ಹಾಗೆ ಕೆಲವೊಮ್ಮೆ ಬೇಕು ಬೇಡ ಎಲ್ಲವನ್ನು ತಾನೇ ನಿರ್ಧರಿಸುತ್ತೆ..

ಇನ್ನು ಕೆಲವು ಬಾರಿ ಮನಸೊಂದು ಮೆದುಳೊಂದು ಪ್ರತ್ಯೇಕ ಅಭಿಪ್ರಾಯ ನೀಡುತ್ತೆ ಆಗ ನಾವು ಎಲ್ಲೋ ಕಳೆದು ಹೋಗೋ ಸಂದರ್ಭ ಬರುತ್ತದೆ....

ತುಂಬಾ ಚೆನ್ನಾಗಿದೆ ನಿಮ್ಮ ಬರಹಗಳು ಹೀಗೆ ಮುಂದುವರಿಸಿ.....

ವಂದನೆಗಳು

Girish Jamadagni said...

ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಹೀಗೇ ಭೇಟಿ ನೀಡುತ್ತಿರಿ.

- ಗಿರೀಶ್ ಜಮದಗ್ನಿ