Monday 24 November 2008

ಕನ್ನಡಕ್ಕೆ ಕನ್ನಡಿ !

ಕನ್ನಡಕ್ಕೆ ಇತ್ತೀಚೆಗೆ ದೊರೆತ ಶಾಸ್ತ್ರೀಯ ಸ್ಥಾನ ನಿಜಕ್ಕೂ ಹೆಮ್ಮೆಯ ವಿಷಯ. ವಿಧ್ಯುಕ್ತವಾಗಿ ಶಾಸ್ತ್ರೀಯ ಭಾಷೆಯ ಹಣೇಪಟ್ಟಿ ಇರದಿದ್ದರೂ ಕೂಡ, ಹಿಂದಿನಿಂದಲೂ ಕನ್ನಡ ಭಾಷೆ ಶಾಸ್ತ್ರೀಯ ಭಾಷೆಯಾಗಿಯೇ ಇತ್ತು! ಈ ಔಪಚಾರಿಕ ಸ್ಥಾನ-ಮಾನದಿಂದ ಕನ್ನಡಕ್ಕೆ ಎಷ್ಟು ಉಪಯೋಗವಾಗುತ್ತೋ ಗೊತ್ತಿಲ್ಲ. ಆದರೆ, ಕನ್ನಡದ ಅಭಿವೃದ್ಧಿಗೆ, ಕನ್ನಡಕ್ಕೆ ಸಂಬಂಧಿಸಿದ ಸಂಶೋಧನೆಗೆ ಸರ್ಕಾರ ಮೀಸಲಿಡುವ ೧೦೦ ಕೋಟಿಯಿಂದ, ಸುಮಾರು ಜನರ ಅಭಿವೃದ್ಧಿಯಂತೂ ಆಗಲಿದೆ!

ಇಷ್ಟಾಗಿಯೂ, ಭಾಷೆಯ ಅಭಿವೃಧ್ಧಿ ಎಂದರೆ ಏನು? ಹೆಚ್ಚು ಹೆಚ್ಚು ಜನರು ಆ ಭಾಷೆಯನ್ನು ಬಳಸುವುದೇ? ಕರ್ನಾಟಕದಲ್ಲೇ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಯುವ ಪೀಳಿಗೆಗೆ, ಕನ್ನಡದಲ್ಲಿ ಮಾತನಾಡುವುದೇ ಘನತೆಗೆ ಕಮ್ಮಿ ಎನ್ನುವ ಮನಸ್ಥಿತಿಯಿದೆ! ಮೂಲತಹ ಕನ್ನಡಿಗರ ಮನೆಯಲ್ಲೂ ಅನ್ಯ ಭಾಷೆಯ ಬಳಕೆಯಿದೆ. ಅಪ್ಪ ಅಮ್ಮನ ಸ್ಥಾನದಲ್ಲಿ ಮಾಮ್-ಡ್ಯಾಡ್‌ಗಳ ಹಾವಳಿಯಿದೆ. ಕನ್ನಡ ಪತ್ರಿಕೆ, ಪುಸ್ತಕ ಓದುವ ಹವ್ಯಾಸ ಪಲಾಯನಮಾಡಿದೆ. ನವೆಂಬರ್‌ನಲ್ಲಿ ಮಾತ್ರ ಕನ್ನಡದ ಬಳಕೆ ಎಂಬ ತಪ್ಪು ಕಲ್ಪನೆಯೂ ಮನೆಮಾಡಿದೆ.

ಇನ್ನು ಭಾಷೆಯ ಭಂಡಾರಕ್ಕೆ ಹೊಸ ಹೊಸ ಪದಗಳ ಸೇರಿಸುವುದೇ ಅಭಿವೃಧ್ಧಿಯಾದರೆ, ಅದಂತೂ ಹೇರಳವಾಗಿ ನಡೆಯುತ್ತಿದೆ! ಕನ್ನಡದ ಬಳಕೆಯಲ್ಲಿ ಈಗಂತೂ ಪರಭಾಷೆಯ ಪದಗಳೇ ಹೆಚ್ಚು. ಬಹುಶಃ, ಹಿಂದಿನ ಸಾವಿರ ವರ್ಷಗಳಲ್ಲಿ ಸೇರದಷ್ಟು ಪದ, ಕಳೆದ ನೂರು ವರ್ಷಗಳಲ್ಲಿ ಕನ್ನಡಕ್ಕೆ ಸೇರ್ಪಡೆಯಾಗಿದೆ. ಲೈಟು, ಗೇಟು, ಸ್ವಿಚ್ಚು, ಪೆನ್ನು, ಬುಕ್ಕು, ಕುರ್ಚಿ, ರೋಡು, ಮಾರ್ಕೆಟ್ಟು ಇತ್ಯಾದಿಯಂತೆ ಬೆಳಗಿನಿಂದ, ರಾತ್ರಿಯವರೆಗಿನ ನಮ್ಮ ಮಾತಿನಲ್ಲಿ, ಬಹಳಷ್ಟು ಪದಗಳು ಬೇರೆ ಭಾಷೆಯವು. ನಮ್ಮ ಮಾತುಗಳಲ್ಲಿ ನುಸುಳಿ, ನಮ್ಮ ಭಾಷೆಯ ಜೊತೆ ಸೇರಿ, "ಉ"ಕಾರದಿಂದ ಅಂತ್ಯಗೊಂಡು, ಹಲವು ಬಾರಿ, ಅದರ ಕನ್ನಡದ ಮೂಲ ಪದಗಳೆ ಙ್ನಾಪಕ ಬರುವುದಿಲ್ಲ. ಇನ್ನು ಕೆಲವು ಬಾರಿ, ಇವೆಲ್ಲ ಕನ್ನಡ ಪದಗಳೇ ಇರಬಹುದೆಂಬ (ಕೆಟ್ಟ) ಸಂದೇಹ ಕೂಡ ಬರುವುದಿದೆ.

ನಾವು ಯಾಕೆ, ಕನ್ನಡ ಮಾತನಾಡಲು ಹಿಂದೇಟು ಹಾಕುತ್ತೇವೆ? ಕನ್ನಡದಲ್ಲಿ ಮಾತನಾಡುವುದು ಕೀಳು ಎಂಬ ಧೋರಣೆಯಾಕೆ? ಬೇರೆ ಭಾಷೆಯಲ್ಲಿರುವ ಯಾವ ಗುಣ, ಛಂದ(ಸ್ಸು) ನಮ್ಮ ಕನ್ನಡದಲ್ಲಿಲ್ಲ? ಕನ್ನಡ ಕಲಿಯಲು ಕಷ್ಟವೇ? ಮಾತನಾಡಲು ಕಷ್ಟವೇ? ಕನ್ನಡ ನಿಘಂಟಿನಲ್ಲಿ ಸಂದರ್ಭಕ್ಕೆ ಬೇಕಾದ ಪದಗಳೇ ಇಲ್ಲವೇ? ಇಷ್ಟು ಸಾವಿರ ವರ್ಷ ಉಳಿದು, ಬೆಳೆದು ಬಂದಿರುವ ಈ ಅದ್ಭುತ ಭಾಷೆಯಲ್ಲಿರುವ ಅಂತಹ ನ್ಯೂನತೆಗಳಾದರೂ ಏನು?

ತೊಂದರೆಯಿರುವುದು ಭಾಷೆಯಲ್ಲಲ್ಲ! ರೋಗವಿರುವುದು ನಮ್ಮಲ್ಲೇ. ನಮ್ಮ ಭಾಷೆ ಬಗ್ಗೆ ನಮಗೇ ಅಭಿಮಾನ ಕಮ್ಮಿ ಅಥವ ಇಲ್ಲವೇ ಇಲ್ಲ ಅಂದರೂ ಸರಿಯೆ. ಇದು ನಮ್ಮ ಮನೆ, ಇವರು ನನ್ನ ತಂದೆ, ಇವರು ನನ್ನ ತಾಯಿ ಎಂದು ಹೇಳುವಷ್ಟೇ ಅಭಿಮಾನದಿಂದ, ಕನ್ನಡ ನನ್ನ ಭಾಷೆ ಎಂದು ಹೇಳುವವರು ಬಹಳ ಕಮ್ಮಿ. ಕನ್ನಡಕ್ಕೆ, ಸಧ್ಯದ ಪರಿಸ್ಥಿತಿಯಲ್ಲಿ, ಅಭಿವೃಧ್ಧಿಯ ಜೊತೆಗೆ, ಅದರ ರಕ್ಷಣೆಯ, ಪೋಷಣೆಯ ಅಗತ್ಯವಿದೆ. ಮಕ್ಕಳಿಗೆ ಇತರೆ ಭಾಷೆಯ ಜೊತೆಗೆ, ಕನ್ನಡವನ್ನು ಕಲಿಸಲೇ ಬೇಕು. ಈಗಲೂ ಕರ್ನಾಟಕದಲ್ಲಿ, ಕನ್ನಡ ಹೆಚ್ಚು ಬಳಕೆಯಲ್ಲಿರುವುದು, ಇಂಗ್ಲಿಷ್ ಅಥವ ಅನ್ಯ ಭಾಷೆಯ ಶಾಖ ತಟ್ಟದ ಹಳ್ಳಿಗಳಲ್ಲಿ, ಗ್ರಾಮಗಳಲ್ಲಿ, ತಾಲ್ಲೂಕ್‌ಗಳಲ್ಲೇ ಹೊರತು ನಗರ ಪ್ರದೇಶಗಳಲ್ಲಲ್ಲಾ! ಆದ್ದರಿಂದ ಕನ್ನಡ ಬೆಳೆಸುವ ಕಾರ್ಯ ಪ್ರಮುಖವಾಗಿ ನಗರಪ್ರದೇಶಗಳಲ್ಲಾಗಬೇಕು. ಹಾಗೆ, ಗ್ರಾಮಾಂತರ ಪ್ರದೇಶಗಳಲ್ಲಿ ಕನ್ನಡ ಉಳಿಸಲು, ಬಳಸಲು ಪ್ರೊತ್ಸಾಹ ನೀಡಬೇಕು. ದೈನಂದಿನ ಮಾತುಕತೆಗಳಲ್ಲಿ ಕನ್ನಡದ ಬಳಕೆ ಹೆಚ್ಚಬೇಕು. ಕನ್ನಡ ನಿಘಂಟು ತೆಗೆದು ನೋಡಿ. ನಾವು ಬಳಸದೇ ಇರುವ ಸಾವಿರಾರು ಕನ್ನಡ ಪದಗಳಿವೆ. ಉಪಯೋಗಿಸದೇ ಅವೆಲ್ಲ ಹಾಗೇ ಮರೆಯಾಗುತ್ತಿವೆ. ಅವುಗಳ ಜಾಗದಲ್ಲಿ ಪರಕೀಯ ಭಾಷೆಗಳ ಪದಗಳು ರಾರಾಜಿಸುತ್ತಿವೆ.

ಕನ್ನಡ ಮಾಧ್ಯಮದಲ್ಲೇ ಹೆಚ್ಚು ಓದಿದ ನನಗೆ, ಈಗಲೂ, ವಿಚಾರ, ಗುಣಾಕಾರ, ಮಗ್ಗಿ ಎಲ್ಲ ತಲೆಯಲ್ಲಿ ಮೊದಲು ಬರುವುದು ಕನ್ನಡದಲ್ಲೇ! ಕನ್ನಡದಲ್ಲಿ ಹೆಚ್ಚೇನು ಪಾಂಡಿತ್ಯವಿಲ್ಲದಿದ್ದರೂ, ಬೇರೆ ಭಾಷೆಗಿಂತ ಕನ್ನಡದ ಬಳಕೆ ನನಗೆ ಸರಾಗ! ಇದಕ್ಕೆ ನಾನು ಬೆಳೆದ ಗ್ರಾಮಾಂತರ ಪರಿಸರವೇ ಕಾರಣ.

ಕೊನೆಯದಾಗಿ, ಒಬ್ಬ ಮನುಷ್ಯ ತನ್ನನ್ನು ಗುರುತಿಸಿಕೊಳ್ಳುವುದು ಅವನ ಸಂಸ್ಕೃತಿಯಿಂದ, ತಾಯ್ನಾಡಿನಿಂದ, ಮಾತೃಭಾಷೆಯಿಂದ. ಹಾಗಾಗಿ, ಮಾತೃಭಾಷೆಗೆ ಹೆತ್ತತಾಯಿಯಷ್ಟೇ ಮಹತ್ವ, ಗೌರವ. ಬೇರೆ ಭಾಷೆಯನ್ನು ಕಲಿಯುವುದು ಅಗತ್ಯ. ಆದರೆ, ಮಾತೃಭಾಷೆಯನ್ನು ಕಡೆಗಾಣಿಸುವುದು ಘೋರ ಅಪರಾಧ.

ಈ ಲೇಖನ ಬರೆಯಬೇಕಾದರೆ, ಸಾಲಿ ರಾಮಚಂದ್ರರಾವ್ (೧೮೮೮-೧೯೭೮) ಅವರ ಸುಂದರ ಪದ್ಯವೊಂದು ನೆನಪಿಗೆ ಬಂತು.

ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ,

ಕನ್ನಡ ನೆಲದ ಕಲ್ಲೆನಗೆ ಸಾಲಗ್ರಾಮ ಶಿಲೆ ಕನ್ನಡವೆ ದೈವಮೈ,

ಕನ್ನಡ ಶಬ್ದಮೆನಗೋಂಕಾರಮೀಯೆನ್ನ,ಕನ್ನಡ ನುಡಿಯೆ ಗಾಯತ್ರಿಯದ್ಭುತ ಮಂತ್ರ,

ಮಿನ್ನಾವುದೈಪೆರತು ಕನ್ನಡದ ಸೇವೆಯಿಂದಧಿಕಮೀಜಗದೊಳೆನಗೆ?

-ಗಿರೀಶ್ ಜಮದಗ್ನಿ

1 comment:

ದಿವ್ಯಾ said...

neevu hELuvudu nija..

kannada maadhyamadalli kalitha nanu eegaloo hattombOtli toMbattu andkondu matte anuvadisi - "ninety" antha magaLige paaTa hELikoduva paripaaTa munduvaredide..

kannada khaMditavaagi uLiyuttade, muMduvareyuttade aMta nanna naMbike..