Sunday 26 October 2008

ಕಾಯೋದೇ ಕೈಲಾಸ !

ಮೊನ್ನೆ ಯಾರಿಗೋ ಕಾದೂ ಕಾದೂ ಸುಸ್ತಾಗಿದ್ದೆ. ೩ ಘಂಟೆಗೆ ಬರ್ತೀನಿ ಅಂದವರು ಆರಾದ್ರೂ ಬರಲೇ ಇಲ್ಲ ಆಸಾಮಿ. ಒಂದು ಘಂಟೆ, ಎರಡು ಘಂಟೆ stretch ಮಾಡಿದ್ರೆ O.K! 3 ಘಂಟೆ ಅಂದ್ರೆ ಆಗುತ್ತೇ ತಡೆಯೋಕ್ಕೆ? ಈ ಕಾಯೋದರ ಬಗ್ಗೇನೆ ಯೋಚನೆ ಶುರು ಆಯ್ತು!

ಬಾಲ್ಯದಿಂದ ಮುಪ್ಪಿನವರೆಗೆ ಏನಾದ್ರು ಒಂದಕ್ಕೆ ಕಾಯೋದೇ ಆಗುತ್ತೆ ಅಲ್ವಾ? ಬಾಲ್ಯದಲ್ಲಿ, ಶಾಲೆ ಇದ್ದಾಗ ರಜಾದಿನಕ್ಕೆ, ರಜೆ ಮುಗಿಯುತಿರಬೇಕಾದ್ರೆ ಶಾಲಾ ದಿನಕ್ಕೆ, ಶಾಲೆಯ ದಿನಗಳಲ್ಲಿ ಕೊನೆಯ ಪೀರಿಯಡ್‍ಗೆ, ಶನಿವಾರದ ಅಸೆಂಬ್ಲಿಗೆ, ವಾರದಲ್ಲಿ ಒಂದು ದಿನ ಸಿಗುತ್ತಿದ್ದ ಪಿ.ಟಿ ಪೀರಿಯಡ್‍ಗೆ, ಕೊನೆಯ ಪರೀಕ್ಷೆಗೆ, ಆಮೇಲೆ ಫಲಿತಾಂಶಕ್ಕೆ, ನೆಚ್ಚಿನ ಹೀರೋ ನಟಿಸಿದ ಚಿತ್ರದ ಬಿಡುಗಡೆಯ ದಿನಕ್ಕೆ, ಊರಿನ ಕೆರೆಗೆ ಹೋಗಿ ಗಣಪತಿ ಮುಳುಗಿಸೋಕ್ಕೆ, ದೀಪಾವಳಿ ಹಬ್ಬದಲ್ಲಿ ಪಟಾಕಿ ಹೊಡೆಯೋಕ್ಕೆ, ಪ್ಯಾಂಟ್ ತೊಡುವ ದಿನಕ್ಕೆ, ಮೀಸೆ ಬರುವ ಕಾಲಕ್ಕೆ, ಎದುರು ಮನೆ ಹುಡುಗಿಯ ಕುಡಿನೋಟಕ್ಕೆ, ಮೊದಲ ಪ್ರೇಮ-ಪತ್ರದ ಉತ್ತರಕ್ಕೆ, ಮೆಚ್ಚಿದ ಹುಡುಗಿಯ ಮದುವೆಯಾಗಲು ಅಪ್ಪ ಅಮ್ಮನ ಅನುಮತಿಗೆ, ಕೆಲಸದ ಮೊದಲ ದಿನಕ್ಕೆ, ಮೊದಲ ತಿಂಗಳ ಸಂಬಳಕ್ಕೆ, ಮದುವೆಯ ದಿನಕ್ಕೆ, ಮಧುಚಂದ್ರಕೆ, ಮೊದಲ ಮಗುವಿನ ಆಗಮನಕ್ಕೆ, ಮತ್ತೆ ಮಕ್ಕಳ ಜೀವನದ ಆಗುಹೋಗುಗಳಿಗೆ, ಅವರ ಮದುವೆಯ ದಿನಕ್ಕೆ, ಜವಾಬ್ದಾರಿ ಕಳೆಯುವ ದಿನಕ್ಕೆ, ನಿವೃತ್ತಿ ಜೀವನದ ದಿನಗಳಿಗೆ, ಅಂತಕನ ದೂತರ ಆಗಮನಕ್ಕೆ......ಹೀಗೆ ಎಲ್ಲವುದಕ್ಕೂ ಕಾಯುವುದು!

ನಮಗೆ ಬೇಕಿನಿಸಿದ್ದು ತಕ್ಷಣ ಸಿಕ್ಕಿಬಿಟ್ಟರೆ, ಅದರಲ್ಲಿ ಮಜವೇ ಇರುವುದಿಲ್ಲ! ಕಾದನಂತರ ಅದು ದೊರೆತಾಗ ಸಿಗುವ ಸುಖ, ಖುಷಿ ಅಪರಿಮಿತ. ನಮ್ಮ ದೇಶದಲ್ಲಿ ಬಿಡಿ, ಎಲ್ಲದಕ್ಕೂ ಕಾಯಬೇಕು. ಬರ್ತ್ ಸರ್ಟಿಪಿಕೇಟ್‌ನಿಂದ ಹಿಡಿದು ಡೆತ್ ಸರ್ಟಿಪಿಕೇಟ್ ತನಕ! ಸಣ್ಣ ಸಣ್ಣ ಕೆಲಸಕ್ಕೂ ಕಾಯಲೇಬೇಕು. ಹೀಗೆ ಕಾದೂ ಕಾದೂ ನಾವು ಅದಕ್ಕೆ ಒಗ್ಗಿ ಹೋಗಿದ್ದೇವೆ! ನೀವು ಏನೇ ಹೇಳಿ, ಒಂದು ಹತ್ತು ಸಾರಿ ಅಲೆದು, ಎರಡು ತಿಂಗಳು ಕಾದು, ಸ್ವಲ್ಪ ಗರಂ ಆಗಿ, ಕೂಗಾಡಿ, ರೇಗಾಡಿ, ಸ್ವಲ್ಪ ಅವರಿವರಿಂದ "ಹೇಳಿಸಿ", ಅವರಿವರಿಗೆ "ತಿನ್ನಿಸಿ" , ಆಮೇಲೆ ನಮ್ಮ ಕೆಲಸವಾದರೆ, ಆಗ ಏನೋ ಸಾಧಿಸಿದ ಹಿಗ್ಗು! ಅಪ್ಲಿಕೇಷನ್ ಕೊಟ್ಟ ಹತ್ತು ನಿಮಿಷದಲ್ಲೇ ಕೆಲಸವಾದರೆ, ಏನೋ ಕಸಿವಿಸಿ. ಕೆಲಸ ಮುಗಿದರೂ, ಸುಖವಿಲ್ಲ, ಸಮಾಧಾನವಿಲ್ಲ. ಕೆಲಸ ಸರಿಯಾಗಿ ಆಯಿತೋ ಇಲ್ಲವೋ ಎನ್ನುವ ಗುಮಾನಿ!

Between the wish and the thing, life lies waiting ಅನ್ನೋ ಹಾಗೇ, ಕಾಯುವುದೇ ಜೀವನ, ಕಾಯುವುದರಲ್ಲೇ ಜೀವನ! ಕಾಯುವುದು ಇಲ್ಲದಿದ್ದರೆ, ಜೀವನಕ್ಕೆ ಅರ್ಥವೇ ಇರುತ್ತಿರಲಿಲ್ಲವೇನೋ...

ನನ್ನ ಮುಂದಿನ ಬ್ಲಾಗ್ ಲೇಖನಕ್ಕೆ ಕಾಯ್ತೀರ ತಾನೆ? ನಾನು, ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ ಕಾಯ್ತಾ ಇರ್ತೀನಿ....

ಗಿರೀಶ್ ಜಮದಗ್ನಿ

1 comment:

Unknown said...

Great Girish!!!
It is indeed fun toread your blogs.
Infact, you have inspired me to start my own..
We are eager and "waiting" for your delicious dishouts..

Cheers,
Atul Sunalkar